ಗದಗ: ಗುರು ಬ್ರಹ್ಮ, ಗುರು ವಿಷ್ಣು ಗುರುದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ ಅಂತಾರೆ. ಗುರುವಿಗೆ ಅಷ್ಟೊಂದು ಪೂಜ್ಯ ಸ್ಥಾನವನ್ನು ನಮ್ಮ ಸಮಾಜ ನೀಡಿದೆ. ಆದ್ರೆ, ಇಲ್ಲೋರ್ವ ಶಿಕ್ಷಕ ಮಾಡಬಾರದ ಕೆಲಸ ಮಾಡಿದ್ದಾನೆ.
ಹೌದು, ನಾಲ್ಕನೇ ತರಗತಿ ವಿದ್ಯಾರ್ಥಿಗೆ ಸಲಿಕೆಯಿಂದ ಹೊಡೆದು ಆತನನ್ನು ಕೊಲೆ ಮಾಡಿದ್ದಾನೆ ಎನ್ನಲಾಗ್ತಿದೆ. ವಿದ್ಯಾರ್ಥಿಯನ್ನು ಬಿಡಿಸಲು ಬಂದ ಶಿಕ್ಷಕಿ ಹಾಗೂ ಶಿಕ್ಷಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಆತನ ನಡೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಲಿಕೆಯಿಂದ ಹೊಡೆದ ಶಿಕ್ಷಕ: ಗದಗ ಜಿಲ್ಲೆ ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇದೇ ಶಾಲೆಯ ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿ ಎನ್ನುವಾತ, ತನ್ನ ನಲಿಕಲಿ ಕ್ಲಾಸ್ ರೂಮ್ನಿಂದ ಒಂದನೇ ಮಹಡಿಯಲ್ಲಿನ ನಾಲ್ಕನೇ ಕ್ಲಾಸ್ ರೂಂಗೆ ಹೋಗಿದ್ದಾನೆ. ಅಲ್ಲಿನ ಎಲ್ಲಾ ಮಕ್ಕಳನ್ನು ಒಳಗಡೆ ಕೂಡಿ ಕೀಲಿ ಹಾಕಿದ್ದಾನೆ. ಬಳಿಕ ನಾಲ್ಕನೇಯ ತರಗತಿ ಭರತ್ ಬಾರಕೇರ್ ಎನ್ನುವ ವಿದ್ಯಾರ್ಥಿಯನ್ನು ಸಲಿಕೆಯಿಂದ ಅಟ್ಟಾಡಿಸಿಕೊಂಡು ಹೊಡೆದು, ಮೇಲಿಂದ ಕೆಳಗಿ ದೂಕಿ ಕ್ರೂರತೆ ಮೆರೆದಿದ್ದಾನೆ.
ಶಿಕ್ಷಕಿ ಮೇಲೂ ಮಾರಣಾಂತಿಕ ಹಲ್ಲೆ: ಭರತ್ನ ಮೇಲೆ ಹಲ್ಲೆ ಮಾಡ್ತಾಯಿರೋದನ್ನು ಅದೇ ಕ್ಲಾಸಿನ ಶಿಕ್ಷಕಿ ಕೇಳಲು ಬಂದಾಗ ಸಲಿಕೆಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಅಲ್ಲದೇ ಇನ್ನೋರ್ವ ಶಿಕ್ಷಕನ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಕೂಡಲೇ ವಿದ್ಯಾರ್ಥಿ ಭರತ್ ಹಾಗೂ ಅತಿಥಿ ಶಿಕ್ಷಕಿ ಗೀತಾ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ನರಗುಂದ ತಾಲೂಕಾ ಆಸ್ಪತ್ರೆಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಭರತ್ ಮೃತಪಟ್ಟಿದ್ದಾನೆ.
ಶಿಕ್ಷಕಿ ಗೀತಾ ಕೂಡಾ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಆದ್ರೆ ಇಷ್ಟೊಂದು ಭೀಕರವಾಗಿ ಹಲ್ಲೆ ಯಾಕೆ ಮಾಡಿದ್ದಾನೆ ಎನ್ನುವುದು ಗೊತ್ತಾಗುತ್ತಿಲ್ಲ. ಹದ್ಲಿ ಗ್ರಾಮದವರಾದ ಆರೋಪಿ ಶಿಕ್ಷಕ ಮುತ್ತಪ್ಪ ಹಡಗಲಿ ಹಾಗೂ ಅತಿಥಿ ಶಿಕ್ಷಕಿ ಗೀತಾ ಬಾರಕೇರ್ ಕಳೆದ ಒಂದು ವರ್ಷದಿಂದ ಅತಿಥಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗೀತಾ ಅವರ ಮಗ ಭರತ್ ಕೂಡ ಇದೇ ಶಾಲೆಯ ನಾಲ್ಕನೇಯ ತರಗತಿ ವಿದ್ಯಾರ್ಥಿಯಾಗಿದ್ದ.
ಗ್ರಾಮಸ್ಥರಿಂದ ಆಕ್ರೋಶ: ನರಗುಂದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಶಾಲೆಯಲ್ಲಿ ಯಾವುದೇ ತಪ್ಪು ಮಾಡದ ವಿದ್ಯಾರ್ಥಿಯನ್ನು ಕೊಲೆ ಮಾಡಿರೋದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಗದಗ ಎಸ್ಪಿ ಶಿವಪ್ರಕಾಶ್ ದೇವರಾಜು ಹಾಗೂ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಅವರು ಬಂದು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಎಸ್ಪಿ ಶಿವಪ್ರಕಾಶ್ ದೇವರಾಜು, ಬಾಲಕನನ್ನು ಶಿಕ್ಷಕ ಯಾಕೆ ಕೊಲೆ ಮಾಡಿದ್ದಾನೆ ಎನ್ನುವುದು ಗೊತ್ತಾಗಿಲ್ಲ, ತನಿಖೆ ಮಾಡುತ್ತಿದ್ದೇವೆ. ಒಂದು ವಿಶೇಷ ತಂಡವನ್ನು ರಚನೆ ಮಾಡಿದ್ದು, ಆದಷ್ಟು ಬೇಗ ಆರೋಪಿಯನ್ನು ಬಂಧಿಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿ ಮೇಲೆ ಶಟಲ್ ಬ್ಯಾಟ್ನಿಂದ ಹಲ್ಲೆ ನಡೆಸಿದ ಉಪನ್ಯಾಸಕ, ಪೋಷಕರ ಆಕ್ರೋಶ
ಅತಿಥಿ ಶಿಕ್ಷಕರಾದ ಮುತ್ತಪ್ಪ ಹಡಗಲಿ ಹಾಗೂ ಗೀತಾ ಬಾರಕೇರ್ ಒಂದೇ ಗ್ರಾಮದವರು. ಗೀತಾ ಅವರ ಮಗನನ್ನೇ ಕೊಲೆ ಮಾಡಿರೋದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಆದ್ರೆ ಕಿರಾತಕ ಶಿಕ್ಷಕ ವಿದ್ಯಾರ್ಥಿಯನ್ನು ಕೊಲೆ ಮಾಡಿದ್ದಕ್ಕೆ ಇಡೀ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ರೂರಿ ಶಿಕ್ಷಕ ನಮ್ಮ ಕೈಗೆ ಸಿಕ್ಕಿದ್ರೆ, ಅಲ್ಲೇ ಬುದ್ಧಿ ಕಲಿಸುತ್ತಿದ್ದೆವು. ಈಗ ಆತನಿಗೆ ಗಲ್ಲು ಶಿಕ್ಷೆ ಆಗಬೇಕು ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ. ಜ್ಞಾನ ದೇಗುಲದಲ್ಲಿ ನಡೆದ ಈ ಕೊಲೆಯಿಂದ ಇಡೀ ಜಿಲ್ಲೆ ಬೆಚ್ಚಿಬಿದ್ದಿದ್ದು, ಕೊಲೆಗಾರ ಶಿಕ್ಷಕನಿಗೆ ತಕ್ಕ ಶಿಕ್ಷೆಯಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ.