ಗದಗ: ತಾಲೂಕಿನ ಮುಳಗುಂದದ ಸಮೀಪದ ಶಿರೋಳ ಗ್ರಾಮದ ಹೊರವಲಯದ ತೋಟದ ಬಾವಿಯಲ್ಲಿ ಸೋಮವಾರ ತಾಯಿ ಎರಡು ಮಕ್ಕಳ ಶವ ಪತ್ತೆಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಪತಿ ಸೇರಿದಂತೆ ಮೂವರನ್ನು ಮುಳಗುಂದ ಪೊಲೀಸರು ಬಂಧಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಪತಿ ಬಸಯ್ಯ, ಮಾವ ಚನ್ನಬಸಯ್ಯ ಮತ್ತು ರುದ್ರವ್ವ ಈ ಮೂರು ಜನ ಸೇರಿ ವಿನಾಕಾರಣ ಮಹಿಳೆಯ ಮೇಲೆ ಸಂಶಯ ವ್ಯಕ್ತಪಡಿಸಿ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಕುಟುಂಬದವರ ಕಿರುಕುಳಕ್ಕೆ ಮನನೊಂದು 8 ವರ್ಷ ಮಗ, 5 ವರ್ಷದ ಮಗಳೊಂದಿಗೆ ಬಾವಿಗೆ ಬಿದ್ದು 28 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತಳ ಸಂಬಂಧಿಕ ಗುದ್ನಯ್ಯ ಇಂಗಳಹಳ್ಳಿ ನೀಡಿದ ದೂರಿನ್ವಯ ಮುಳಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನೆಗೆ ಸಂಬಂಧಪಟ್ಟಂತೆ ಆರೋಪಿಗಳಾದ ಬಸಯ್ಯ ದಂಡಿನ , ಚನ್ನಬಸಯ್ಯ ದಂಡಿನ , ರುದ್ರವ್ವ ದಂಡಿನ ಅವರನ್ನು ಪೊಲೀಸರು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.