ಹುಬ್ಬಳ್ಳಿ: ಜನಪ್ರತಿನಿಧಿಗಳು ಇನ್ನೊಬ್ಬರಿಗೆ ಮಾದರಿಯಾಗಿರಬೇಕು. ಯಾರೇ ತಪ್ಪು ಮಾಡಿದರು ಅದು ಸರಿಯಲ್ಲ. ಸಾರ್ವಜನಿಕರ ಮೇಲೆ ಇದು ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದನ್ನ ಮೊದಲು ನಾಯಕರು ವಿಚಾರ ಮಾಡಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅಸಮಾಧಾನ ಹೊರ ಹಾಕಿದರು.
ನಗರದಲ್ಲಿಂದು ತಿಪ್ಪಾರೆಡ್ಡಿ ಆಡಿಯೋ ಪ್ರಕರಣಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಶಾಸಕರಾದವರು, ಮಂತ್ರಿಯಾದವರು ಈ ರೀತಿ ಮಾಡೋದು ಸರಿಯಲ್ಲ. ಸಾಮಾನ್ಯ ಜನರು ಈ ರೀತಿ ಮಾಡುವುದಿಲ್ಲ, ಪ್ರಮಾಣಿಕವಾಗಿ ಹೇಳುವುದಾದರೆ ಈ ತರಹದ ವಿಚಾರ ನನಗೆ ಎಳ್ಳಷ್ಟು ಒಪ್ಪಿಗೆಯಾಗಿಲ್ಲ. ಜನಪ್ರತಿನಿಧಿಗಳೇ ಈ ರೀತಿ ಕಚ್ಚಾಡಿದರೆ ಹೇಗೆ ಶಾಸಕರು ಹೇಳಿದಾಗ ಮಂತ್ರಿಯಾದವರು ಒಂದಷ್ಟು ತಡೆದುಕೊಳ್ಳಬೇಕು.
ಜನಪ್ರತಿನಿಧಿಗಳು ಸಾರ್ವಜನಿಕರಿಗೆ ಮಾದರಿಯಾಗಿರಬೇಕು ಸಿಡಿ ಇತ್ಯಾದಿ ಮಾಡ್ತೀನಿ ಅಂತಾರೆ, ಏನಿದರ ಅರ್ಥ. ಈ ಘಟನೆಯಿಂದ ನನಗೆ ತುಂಬಾ ನೋವಾಗಿದೆ. ಮೊದಲೆಲ್ಲ ರಾಜಕೀಯದಲ್ಲಿ ಈ ರೀತಿ ಇರಲಿಲ್ಲ, ಇತ್ತೀಚಿಗೆ ಹೆಚ್ಚಾಗಿದೆ, ಮಾದರಿಯಾದಂತಹ ಜನರು ಮಾದರಿಯಾಗಿರಬೇಕು ಇದರಿಂದ ವೋಟ್ ಹಾಕಿ ಗೆಲ್ಲಿಸಿದಂತಹ ಸಾರ್ವಜನಿಕರ ಮೇಲೆ ಪರಿಣಾಮ ಬೀಳುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಲ್ಲ ಸರ್ಕಾರದಲ್ಲೂ ಸಿಡಿ ರಾಜಕಾರಣಗಳಿದ್ದವು. ಆದರೆ, ಈ ಸರ್ಕಾರದಲ್ಲಿ ಅದು ಹೆಚ್ಚಾಗಿದೆ. ಶಿಸ್ತು ಇಲ್ಲ ಎಂದರೆ ಹೀಗಾಗುತ್ತೆ, ಬಿಜೆಪಿಗೆ ಪಕ್ಷಾಂತರ ಮಾಡಿದ್ದಕ್ಕೆ ನನಗೇನು ಬೇಸರವಿಲ್ಲ. ಶಿಕ್ಷಕರು ಮತ್ತು ಇತರರು ಒತ್ತಾಯ ಮಾಡಿದ್ದರ ಮೇರೆಗೆ ಬಿಜೆಪಿ ಸೇರಿದ್ದೇನೆ. ಜೆಡಿಎಸ್ ಮುಖಂಡರ ಮನವೊಲಿಕೆ ಮಾಡಿಯೇ ನಾನು ಬಿಜೆಪಿಗೆ ಹೋಗಿದ್ದೇನೆ. ಸಭಾಪತಿ ಆಗಿರೋದರಿಂದ ನಾನು ಯಾರ ಮೇಲೂ ಕೆಸರು ಎರಚೋಕೆ ಹೋಗಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಮುಂದಿನ ಸಂಕ್ರಾಂತಿ ಒಳಗಾಗಿ ರಾಮಮಂದಿರದ ಕಾಮಗಾರಿ ಪೂರ್ಣ: ಪೇಜಾವರ ಶ್ರೀ
ಏನಿದು ತಿಪ್ಪಾರೆಡ್ಡಿ ಪ್ರಕರಣ?: ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್ ಮಂಜುನಾಥ್ ಅವರು, ಬಿಜೆಪಿ ಶಾಸಕ ತಿಪ್ಪಾರೆಡ್ಡಿ ವಿರುದ್ಧ ನಾಲ್ಕು ವರ್ಷದಲ್ಲಿ 90 ಲಕ್ಷ ಕಮಿಷನ್ ಕೊಟ್ಟಿದ್ದೇನೆ ಎಂದು ಆರೋಪ ಮಾಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್ ಮಂಜುನಾಥ್ ಕಮಿಷನ್ ಕುರಿತಂತೆ ನಮ್ಮ ಬಳಿ ಆಡಿಯೋ ಮತ್ತು ವಿಡಿಯೋ ಇದೆ, ಶಾಸಕ ತಿಪ್ಪಾರೆಡ್ಡಿ ಕ್ಷೇತ್ರದಲ್ಲಿ 700 ರಿಂದ 800 ಕೋಟಿ ರೂ. ಕಾಮಗಾರಿ ನಡೆದಿದೆ. ಶಾಸಕರು ಕೈ ಬೆರಳುಗಳ ಮೂಲಕ ಕಮಿಷನ್ ಕೇಳುತ್ತಿದ್ದರು ಎಂದು ಆರೋಪ ಮಾಡಿದ್ದಾರೆ. ಇದರ ಜೊತೆಗೆ ಕಮಿಷನ್ ಕುರಿತಂತೆ ಆಡಿಯೋ ಇದೆ ಎಂದ ಆರ್ ಮಂಜುನಾಥ್, ಶಾಸಕ ತಿಪ್ಪಾರೆಡ್ಡಿ ಜೊತೆ ಮಾತನಾಡಿರುವ ಆಡಿಯೋವನ್ನು ಸಹ ಎಲ್ಲರಿಗೂ ಕೇಳಿಸಿದರು.
ಸರ್ಕಾರದ ವಿರುದ್ಧ ಪ್ರತಿಭಟನೆ: ಸರ್ಕಾರದ ವಿವಿಧ ಇಲಾಖೆಗಳು ಸಾವಿರಾರು ಕೋಟಿ ಮೊತ್ತದ ಬಿಲ್ ಬಾಕಿ ಉಳಿಸಿಕೊಂಡಿದ್ದು, ಸರ್ಕಾರ ಒಟ್ಟು 25 ಸಾವಿರ ಕೋಟಿ ಬಾಕಿ ಮೊತ್ತ ಬಿಡುಗಡೆ ಮಾಡಬೇಕು, ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿಲ್ಲಲ್ಲ, ಜನವರಿ 18 ರಂದು ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಮಾಡಲಿದ್ದು, ರಾಜ್ಯದ ಎಲ್ಲಾ ಜಿಲ್ಲೆಯ ಸುಮಾರು 20,000ಕ್ಕೂ ಅಧಿಕ ಗುತ್ತಿಗೆದಾರರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ಸಂಕ್ರಮಣ ಮುಗಿಯುತ್ತಿದ್ದಂತೆ ಬಿಜೆಪಿ ಫುಲ್ ಆ್ಯಕ್ಟೀವ್: ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಹೈಕಮಾಂಡ್ ಟಾಪ್ ಲೀಡರ್ಸ್