ಧಾರವಾಡ: ದೇಶದ ಪ್ರಧಾನಿ ನರೇಂದ್ರ ಮೋದಿ 'ಆತ್ಮ ನಿರ್ಭರ ಭಾರತ ಸಂಕಲ್ಪ' ಮಾಡಿದ್ದಾರೆ. ಈ ಸಂಕಲ್ಪಕ್ಕೆ ನಾವೆಲ್ಲರೂ ಸಹಭಾಗಿತ್ವ ಕೊಡಬೇಕಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಕೃಷಿ ವಿವಿ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಕೃಷಿ ಕೆಲಸದ ಮೇಲೆ ದೇಶದ ಜನ ನಿರ್ಭರವಾಗಬೇಕಿದೆ. ಹಾಗಾದಾಗ ಮಾತ್ರ ಭಾರತ ಆತ್ಮನಿರ್ಭರ ಆಗೋದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಇದಕ್ಕೆ ಕೃಷಿ ಪದವೀಧರರ ಪಾತ್ರ ಮಹತ್ವಯುತವಾಗಿದೆ. ಕೃಷಿ ಪದವೀಧರರು ತಾವಿದ್ದ ಸ್ಥಳದಲ್ಲಿ ಕೃಷಿ ಆತ್ಮನಿರ್ಭರ ಮಾಡಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.

ದೇಶದಲ್ಲಿ ಜಾಗತಿಕ ತಾಪಮಾನವೂ ಹೆಚ್ಚುತ್ತಿದೆ. ಇದನ್ನೂ ನಿಯಂತ್ರಣದಲ್ಲಿಡಬೇಕಿದೆ. ನೀರು ಇದ್ದರೆ ಮಾತ್ರ ನಾಳೆ ಇದೆ. ನೀರು ಇದ್ದರೆ ಮಾತ್ರ ನಾವು ಇರುತ್ತೇವೆ. ಹೀಗಾಗಿ, ನೀರಿನ ಸದ್ಬಳಕೆಗೆ ಮಹತ್ವ ಕೊಡಬೇಕಿದೆ. ಇಸ್ರೇಲ್‌ನಲ್ಲಿ ತೀರಾ ಕಡಿಮೆ ಮಳೆ ಆಗುತ್ತದೆ. ಆದರೆ, ಜಗತ್ತಿನ ಕೃಷಿಯಲ್ಲಿ ಇಸ್ರೇಲ್ ಅಗ್ರ ಶ್ರೇಣಿಯಲ್ಲಿದೆ. ನಮ್ಮ ದೇಶದಲ್ಲಿಯೂ ಅಂತಹ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕಿದೆ. ನಮ್ಮ ದೇಶದಲ್ಲಿ ಇವತ್ತಿಗೂ ಹೆಚ್ಚಿನ ಜಮೀನು ಮಳೆಯಾಶ್ರಿತವಿದೆ. ಹೀಗಾಗಿ ಕೃಷಿಯಲ್ಲಿ ನೀರಿನ ಸದ್ಭಳಕೆಗೆ ಹೆಚ್ಚಿನ ಒತ್ತು ಕೊಡಬೇಕಾಗಿದೆ. ಹನಿ ಹನಿ ನೀರಿಗೂ ಮಹತ್ವ ಕೊಟ್ಟು ಬೆಳೆ ಬೆಳೆಸಬೇಕಿದೆ ಎಂದರು.
ಮೂವರಿಗೆ ಗೌರವ ಡಾಕ್ಟರೇಟ್ : ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೂವರಿಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಈ ಪದವಿಗಳನ್ನು ಪ್ರದಾನ ಮಾಡಿದರು. ಜಗದೀಶ ಹರಿ ಕುಲಕರ್ಣಿ, ಯೋಗೇಂದ್ರ ಕೌಶಿಕ್ ಹಾಗೂ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ಈ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ಓದಿ: ಬೆಂಗಳೂರಿನಲ್ಲಿ ಕಾಶ್ಮೀರ ಮೂಲದ ಶಂಕಿತ ಉಗ್ರನ ಬಂಧನ: ಗೃಹ ಸಚಿವ ಆರಗ ಜ್ಞಾನೇಂದ್ರ