ಹುಬ್ಬಳ್ಳಿ: ದೇಶದ್ರೋಹ ಒಂದು ಟ್ರೆಂಡ್ ಆಗಿದ್ದು, ದೇಶದ್ರೋಹಿಗಳ ಪರ ವಕಾಲತ್ತು ವಹಿಸುವುದು ಖಂಡನೀಯ. ಈ ಹಿನ್ನೆಲೆಯಲ್ಲಿ ವಕಾಲತ್ತು ವಹಿಸುವ ವಕೀಲರ ಸನ್ನದನ್ನು ರದ್ದು ಮಾಡಬೇಕು ಹಾಗೂ ದೇಶದ್ರೋಹದ ಹೇಳಿಕೆ ನೀಡಿದವರನ್ನು ಎನ್‌ಕೌಂಟರ್ ಮಾಡಬೇಕು ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಪಾಕಿಸ್ತಾನ ಪರ ಕಾಶ್ಮೀರಿ ವಿದ್ಯಾರ್ಥಿಗಳು ಜಿಂದಾಬಾಂದ್ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ವಕೀಲರ ಸಂಘ ಯುವಕರ ಪರ ವಕಾಲತ್ತು ವಹಿಸದಂತೆ ನಿರ್ಧಾರ ತೆಗೆದುಕೊಂಡಿದ್ದು, ಅವರ ನಿರ್ಧಾರಕ್ಕೆ ಧನ್ಯವಾದ ತಿಳಿಸುತ್ತೇನೆ. ಆದರೆ ದೇಶದ್ರೋಹಿಗಳ ಪರ ವಕಾಲತ್ತು ವಹಿಸಲು ಬೆಂಗಳೂರಿನಿಂದ ಬಂದ ವಕೀಲರಿಂದ ಕರಿ ಕೋಟಿಗೆ ಅಪಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಮಿಷನರ್ ನಡೆ ಖಂಡನೀಯ: ಹುಬ್ಬಳ್ಳಿಯಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಮೂವರನ್ನು ಬಂಧಿಸಿ ವಿಚಾರಣೆ ಕೈಗೊಂಡಿತ್ತು. ಆದರೆ ಹು-ಧಾ ಪೋಲಿಸ್ ಆಯುಕ್ತರು ಮಾತ್ರ ದೇಶದ್ರೋಹಿಗಳನ್ನು ಬಿಡುಗಡೆ ಮಾಡಿದರು. ಆಯುಕ್ತರು ದೇಶದ್ರೋಹಿಗಳ ಬಗ್ಗೆ ಮೃದು ಧೋರಣೆ ತೋರಿದ್ದು ಸರಿಯಲ್ಲ. ಈ ಬಗ್ಗೆ ಗೃಹ ಸಚಿವರನ್ನು ಭೇಟಿ ಮಾಡಿ ಮಾಹಿತಿ ನೀಡಲಾಗುವುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಪೋಲಿಸ್ ಆಯುಕ್ತ ಆರ್.ದಿಲೀಪ್ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ಹೈಕೋರ್ಟ್ ನಲ್ಲಿ ಆಯುಕ್ತರ ವಿರುದ್ಧ ದಾವೆ ಹೂಡಲಾಗುವುದು ಎಂದರು.