ಧಾರವಾಡ : ಹುಬ್ಬಳ್ಳಿ ವಿದ್ಯಾರ್ಥಿಗಳ ದೇಶದ್ರೋಹ ಘೋಷಣೆ ಪ್ರಕರಣ ಆರೋಪಿಗಳ ಪರ ವಕಾಲತ್ತು ವಹಿಸದಿರಲು ನಿರ್ಧಾರ ಮಾಡಿರುವುದಕ್ಕೆ ಧಾರವಾಡ ವಕೀಲರಿಗೆ ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕೃತಜ್ಞತೆ ಸಲ್ಲಿಸಿದರು.
ಧಾರವಾಡದ ವಕೀಲರ ಸಂಘಕ್ಕೆ ಆಗಮಿಸಿದ ಪ್ರಮೋದ್ ಮುತಾಲಿಕ್ ವಕೀಲರ ನಡೆಗೆ ಸಂತಸ ವ್ಯಕ್ತಪಡಿಸಿದರು. ಬೆಂಗಳೂರಿನಿಂದ ವಕಾಲತ್ತು ವಹಿಸಲು ಬಂದಿದ್ದ ವಕೀಲರಿಗೂ ಸಹ ಧಾರವಾಡದ ವಕೀಲರು ವಿರೋಧ ವ್ಯಕ್ತಪಡಿಸಿದ್ದರು.
ವೃತ್ತಿ ಬದಿಗೊತ್ತಿ ದೇಶ ಮುಖ್ಯವೆಂದು ತೋರಿಸಿದ್ದೀರಿ ಎಂದು ವಕೀಲರ ನಡೆಗೆ ಸಂತಸ ವ್ಯಕ್ತಪಡಿಸಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ ಎಸ್ ಗೋಡಸೆಗೆ ಶಾಲು ಹೊದಿಸಿ, ವಕೀಲರಿಗೆ ಗುಲಾಬಿ ಹೂ ನೀಡಿ ಸನ್ಮಾನ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ನಾನು ಧಾರವಾಡದ ವಕೀಲರಿಗೆ ಧನ್ಯವಾದ ಸಲ್ಲಿಸುತ್ತೇನೆ. ಗಾಂಧಿ, ನೆಹರು, ತಿಲಕರು ಕೂಡ ವಕೀಲರೇ ಆಗಿದ್ದರು. ಅವರೆಲ್ಲರೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ಇದೀಗ ಧಾರವಾಡದ ವಕೀಲರು ಒಳ್ಳೆಯ ಸಂದೇಶ ನೀಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಅಲ್ಲದೇ ದೇಶದ್ರೋಹ ಅನ್ನೋದು ಕ್ಯಾನ್ಸರ್ ಇದ್ದಂತೆ, ದೇಶದ ಭದ್ರತೆ ಬಗ್ಗೆ ಆತಂಕ ಕಾಡುತ್ತಿದೆ. ದೇಶದ್ರೋಹಿಗಳನ್ನು ಎನ್ಕೌಂಟರ್ ಮಾಡಿ ಹಾಕಬೇಕು. ವಿನಾಕಾರಣ ಕಾಲಹರಣ ಮಾಡಬಾರದು. ಕಾನೂನು, ಸಂವಿಧಾನ ಇರೋದು ಜನರ ರಕ್ಷಣೆಗೋಸ್ಕರ ಎಂದರು.
ದೆಹಲಿಯಲ್ಲಿ ಹಿಂಸಾಚಾರ ವಿಚಾರದ ಬಗ್ಗೆ ಮಾತನಾಡಿದ ಅವರು, ಸಿಎಎ, ಎನ್ಆರ್ಸಿಯಿಂದ ದೇಶದಲ್ಲಿದ್ದವರಿಗೆ ಏನೂ ತೊಂದರೆ ಇಲ್ಲ. ಈ ಹೋರಾಟದ ಹಿಂದೆ ಕಮ್ಯುನಿಸ್ಟ್ ಹಾಗೂ ಕಾಂಗ್ರೆಸ್ನವರ ಕೈವಾಡವಿರೋ ಶಂಕೆಯಿದೆ. ದೆಹಲಿಯಲ್ಲಿ ನಡೆದಿದ್ದು ದುರದೃಷ್ಟಕರ. ದೇಶದಲ್ಲಿ ಶಾಂತಿ ಕಾಪಾಡಬೇಕಿದೆ ಎಂದು ಮನವಿ ಮಾಡಿದರು.