ಹುಬ್ಬಳ್ಳಿ: ಕೆಫೆ ಕಾಫೀ ಡೇ ಮಾಲೀಕ ಸಿದ್ದಾರ್ಥ್ ಸಾವು ನೋವು ತಂದಿದೆ. ಅವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ. ಆದರೆ, ಅವರ ನಿಗೂಢ ಸಾವಿನ ಹಿಂದೆ ಇರುವ ಕಾಣದ ಕೈವಾಡದ ಕುರಿತು ಪ್ರಮಾಣಿಕ ತನಿಖೆಯಾಗಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್ ಆರ್ ಹಿರೇಮಠ ಆಗ್ರಹಿಸಿದರು.
ನಗರದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾರ್ಕ್ ಪೈಬರ್, ಕೊಲೋಶನ್ ಬಹುದೊಡ್ಡ ಹಗರಣವಾಗಿದ್ದು, ಇದರ ಮುಖ್ಯಸ್ಥರಾಗಿ ಸಿದ್ಧಾರ್ಥ್ ಅವರು ಕೂಡ ಇದ್ದಾರೆ ಎಂದರು. ಸಿದ್ದಾರ್ಥ ಅವರ ವೇ2 ವೆಲ್ತ್ ಹಾಗೂ ಅಲ್ಪಾಗ್ರಾಫ್ ಕಂಪನಿಗಳು ಸಿಂಗಪೂರ್ ಹಾಗೂ ಹಾಂಗ್ ಕಾಂಗದಲ್ಲಿದ್ದು, ತನಿಖಾ ಸಂಸ್ಥೆ 'ಸೆಬಿ' ಸಿದ್ದಾರ್ಥ ಒಡೆತನದ ಎರಡು ಕಂಪನಿಗಳ ಮೇಲೆ ರೂ.14.5 ಕೋಟಿ ಮೊತ್ತದ ದಂಡವನ್ನು ಕೂಡ ವಿಧಿಸಿದ್ದಾರೆ. ಅಲ್ಲದೇ ಸಿದ್ಧಾರ್ಥ ಅವರು ತಮ್ಮ ಸಾವಿನ ಮೊದಲು ಬರೆದ ಪತ್ರ ಸತ್ಯವನ್ನು ಮರೆಮಾಚಲು ಮಾಡಿರುವ ಹುನ್ನಾರ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಅವರು ಹೇಳಿದರು. ತನಿಖಾ ಸಂಸ್ಥೆಗಳು ಪ್ರಮಾಣಿಕ ತನಿಖೆ ಮಾಡಿ ನ್ಯಾಯಕ್ಕೆ ಅಪಚಾರವಾಗದಂತೆ ಕೆಲಸ ನಿರ್ವಹಿಸುವಂತೆ ಒತ್ತಾಯಿಸಿದರು.
ಇತ್ತೀಚೆಗೆ ಮಾಜಿ ಸ್ಪೀಕರ್ ರಮೇಶಕುಮಾರ 17 ಶಾಸಕರನ್ನು ಅನರ್ಹಗೊಳಿಸಿ ಸಾಮಾಜಿಕವಾಗಿ ಇಂತಹ ಜನಪ್ರತಿನಿಧಿಗಳನ್ನು ತಿರಸ್ಕರಿಸುವಂತೆ ಕರೆ ನೀಡಿದ್ದು ಸ್ವಾಗತಾರ್ಹವಾಗಿದೆ. ಪ್ರಜಾಪ್ರಭುತ್ವವನ್ನು ಕೆಳಮಟ್ಟಕ್ಕೆ ಕುಸಿಯುವಂತೆ ಮಾಡುತ್ತಿರುವ ಜೆಸಿಬಿ ಪಕ್ಷಗಳಿಗೆ ಈ ನಿರ್ಣಯ ಒಂದು ಪಾಠ ಕಲಿಸಿದ್ದು, ಮುಂದೆ ಈ ತರಹದ ದುಸ್ಸಾಹ ಮಾಡದಂತೆ ಸಂದೇಶ ರವಾನಿಸಿರುವುದು ಸೂಕ್ತ ಕ್ರಮವಾಗಿದೆ. ರಾಜ್ಯಪಾಲರು ಬಿಜೆಪಿ ಪಕ್ಷ ಅಧಿಕಾರಕ್ಕೆ ತರುವಲ್ಲಿ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ರಾಜ್ಯಪಾಲರು ನಡೆ ಪ್ರಶ್ನಾರ್ಹವಾಗಿದೆ ಎಂದು ಅವರು ಹೇಳಿದರು.