ಹುಬ್ಬಳ್ಳಿ: ನೈರುತ್ಯ ರೈಲ್ವೆಯು ಏಪ್ರಿಲ್ - ಆಗಸ್ಟ್ 2023ರ ಅವಧಿಯಲ್ಲಿ ಸರಕು ಸಾಗಣೆಯಲ್ಲಿ ಹೆಚ್ಚು ಆದಾಯ ಗಳಿಸಿ ದಾಖಲೆ ಮಾಡಿದೆ. ನೈರುತ್ಯ ರೈಲ್ವೆಯು 19.27 ದಶಲಕ್ಷ ಟನ್ ಸರಕುಗಳನ್ನು ಲೋಡ್ ಮಾಡಿ ರೂ. 1,909.77 ಕೋಟಿ ಆದಾಯ ಗಳಿಸಿದೆ. ಇದಲ್ಲದೆ 8.27 ಮಿಲಿಯನ್ ಟನ್ ಕಬ್ಬಿಣದ ಅದಿರನ್ನು ಲೋಡ್ ಮಾಡಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು ಶೇ. 37.6 ರಷ್ಟು ಹೆಚ್ಚಾಗಿದೆ.
ಇದರ ಜೊತೆಗೆ ನ 270 ಆಟೋಮೊಬೈಲ್ ರೇಕ್ಗಳನ್ನು ಲೋಡ್ ಮಾಡಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು ಶೇ. 52.5 ರಷ್ಟು ಹೆಚ್ಚಾಗಿದೆ. ನೈರುತ್ಯ ರೈಲ್ವೆ ಒಂದು ದಿನಕ್ಕೆ ಸರಾಸರಿ 1,991 ವ್ಯಾಗನ್ಗಳನ್ನು ಲೋಡ್ ಮಾಡಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು ಶೇ. 8 ರಷ್ಟು ಹೆಚ್ಚಾಗಿದೆ. ನೈರುತ್ಯ ರೈಲ್ವೆ ಈ ಹಣಕಾಸು ವರ್ಷದ ಆಗಸ್ಟ್ ವರೆಗೆ 19.27 ಮಿಲಿಯನ್ ಟನ್ ಸರಕು ಸಾಗಣೆ ದಾಖಲಿಸಿದೆ. ಇದು ಕಳೆದ ವರ್ಷದ ಲೋಡಿಂಗ್ ಅವಧಿಗೆ ಹೋಲಿಸಿದರೆ ಸುಮಾರು ಶೇ.9.4 ರಷ್ಟು ಹೆಚ್ಚಾಗಿದೆ.
8.27 ಮಿಲಿಯನ್ ಟನ್ ಕಬ್ಬಿಣದ ಅದಿರು, 3.45 ಮಿಲಿಯನ್ ಟನ್ ಉಕ್ಕು, 0.87 ಮಿಲಿಯನ್ ಟನ್ ಖನಿಜ ತೈಲ, 0.49 ಮಿಲಿಯನ್ ಟನ್ ರಸಗೊಬ್ಬರ, 270 ಆಟೋಮೊಬೈಲ್ ರೇಕ್ಗಳನ್ನು ಲೋಡ್ ಮಾಡುವ ಮೂಲಕ ವಲಯವು 1,909.77 ಕೋಟಿ ರೂ. ಸರಕು ಆದಾಯವನ್ನು ಗಳಿಸಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು ಶೇ. 13.9ರಷ್ಟು ಹೆಚ್ಚಾಗಿದೆ.
ಮೈಸೂರು ವಿಭಾಗಕ್ಕೆ ನಗದು ಬಹುಮಾನ: ಮೈಸೂರು ವಿಭಾಗವು ಕಳೆದ ವರ್ಷ ಏಪ್ರಿಲ್-ಜುಲೈವರೆಗೆ 3.12 ಮಿಲಿಯನ್ ಟನ್ ಸರಕುಗಳನ್ನು ಲೋಡ್ ಮಾಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು ಸುಮಾರು ಶೇ. 21 ರಷ್ಟು ಹೆಚ್ಚಾಗಿದೆ. ಈ ಸಾಧನೆ ಮಾಡಿದ ಮೈಸೂರು ವಿಭಾಗಕ್ಕೆ ರೈಲ್ವೆ ಸಚಿವಾಲಯವು ನಗದು ಬಹುಮಾನ ನೀಡಿದೆ. ಮೈಸೂರು ವಿಭಾಗವು 3.12 ಮಿಲಿಯನ್ ಟನ್ ಮೂಲ ಸರಕುಗಳನ್ನು ಲೋಡ್ ಮಾಡಿದೆ. ಕಳೆದ ವರ್ಷದ ಅವಧಿಯಲ್ಲಿ 2.58 ಮಿಲಿಯನ್ ಟನ್ ಸರಕುಗಳನ್ನು ಲೋಡ್ ಮಾಡಲಾಗಿತ್ತು, ಅದಕ್ಕೆ ಹೋಲಿಸಿದರೆ ಸುಮಾರು 21 ರಷ್ಟು ಹೆಚ್ಚಾಗಿದೆ. ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಈ ಸಾಧನೆಗೆ ರೈಲ್ವೆ ಸಚಿವಾಲಯ ಶ್ಲಾಘಿಸುವ ಮೂಲಕ 1.5 ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ನೀಡಿದೆ.
ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ್ ಅವರು, ಮೂಲ ಸರಕುಗಳನ್ನು ಲೋಡ್ ಮಾಡುವ ಮೂಲಕ ಮೈಸೂರು ವಿಭಾಗ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ನಗದು ಹಣ ಪಡೆದಿರುವುದಕ್ಕೆ ಅಭಿನಂದಿಸಿದ್ದಾರೆ. ನೈರುತ್ಯ ರೈಲ್ವೆ ವಲಯವು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚು ಲೋಡಿಂಗ್ ಮಾಡುವ ಮೂಲಕ ದೊಡ್ಡ ಸಾಧನೆ ಮಾಡಲು ಮುಂದಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: