ಹುಬ್ಬಳ್ಳಿ: 73ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಧಾರವಾಡ ಜಿಲ್ಲೆಯ ಆರ್.ಎನ್. ಶೆಟ್ಟಿ ಕ್ರೀಡಾಂಗಣ ಹಾಗೂ ಹುಬ್ಬಳ್ಳಿ ನೆಹರೂ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹುಧಾ ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಕಾರಣದಿಂದಾಗಿ ಸರ್ಕಾರದ ಆದೇಶದ ಮೇರೆಗೆ ದಿನಾಚರಣೆಯನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ನಗರದ ನೆಹರೂ ಮೈದಾನ, ಈದ್ಗಾ ಮೈದಾನ, ಪಾಲಿಕೆ ಆವರಣದಲ್ಲಿ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಧ್ವಜಾರೋಹಣಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವೈದ್ಯರಿಗೆ, ಪೊಲೀಸರಿಗೆ, ಪೌರಕಾರ್ಮಿಕರು ಸೇರಿ ಕೊರೊನಾ ವಾರಿಯರ್ಸ್‌ಗೆ ಇದೇ ವೇಳೆ ಸನ್ಮಾನ ಮಾಡಲಾಗುತ್ತದೆ ಎಂದು ಹೇಳಿದರು.
ಆದೇಶ ಉಲ್ಲಂಘಿಸಿದರೆ ಕೇಸ್
ಕೊರೊನಾ ಸೋಂಕಿತರ ಸಂಖ್ಯೆ ಒಂದೇ ಸಮನೆ ಏರುತ್ತಿರುವ ಕಾರಣ ಸಾರ್ವಜನಿಕ ಗಣೇಶೋತ್ಸವ ಆಚರಿಸದಿರಲು ಗಣೇಶ ಮಹಾಮಂಡಳಿಗೆ ತಿಳಿಸಲಾಗಿದೆ. ಸರಳವಾಗಿ ದೇವಸ್ಥಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಪರಿಸರ ಸ್ನೇಹಿ ಗಣೇಶ ಮೂರ್ತಿಗೆ ಜಿಲ್ಲೆಯಲ್ಲಿ ಒತ್ತು ನೀಡಲಾಗಿದೆ. ಪಿಓಪಿ ಗಣೇಶ ಮೂರ್ತಿಗಳು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಜಪ್ತಿ ಮಾಡಿ ದಂಡ ಹಾಕುವುದಲ್ಲದೆ, ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದ ಅವರು, ಪರಿಸರ ಅಭಿಯಂತರರು ಮತ್ತು ಪರಿಸರ ಮಂಡಳಿಯವರು ಅವುಗಳ ಸ್ಯಾಂಪಲ್ಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದರು.