ಹುಬ್ಬಳ್ಳಿ: ರಾಜ್ಯದಲ್ಲಿಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಹಲವು ವಿದ್ಯಾರ್ಥಿಗಳು ರ್‍ಯಾಂಕ್ ಪಡೆದುಕೊಂಡಿದ್ದಾರೆ. ಚೌಗಲಾ ಎಜ್ಯುಕೇಷನ್ ಸೊಸೈಟಿಯ ವಿದ್ಯಾನಿಕೇತನ ಪಿಯು ಕಾಲೇಜಿನ ಸಾಯಿಶ್ ಗೋಣಿ ವಿದ್ಯಾರ್ಥಿ ವಿಜ್ಞಾನ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ 3ನೇ ರ್ಯಾಂಕ್ಗಳಿಸುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾನೆ. ಈ ಕುರಿತು ಕಾಲೇಜಿನ ಕಾರ್ಯದರ್ಶಿ ಅನಿಲ್ ಕುಮಾರ ಚೌಗಲಾ ಹರ್ಷ ವ್ಯಕ್ತಪಡಿಸಿದರು.
ಸಾಯೀಶ್ ಗೋಣಿ ಹುಬ್ಬಳ್ಳಿಯ ಚೌಗಲಾ ಎಜ್ಯುಕೇಷನ್ ಸೊಸೈಟಿಯ ವಿದ್ಯಾನಿಕೇತನ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಇಂಗ್ಲಿಷ್ – 96, ಸಂಸ್ಕೃತ – 100, ಭೌತವಿಜ್ಞಾನ–99, ರಸಾಯನ ವಿಜ್ಞಾನ – 99, ಗಣಿತ – 100, ಜೀವವಿಜ್ಞಾನ – 100 ಒಟ್ಟು 594/600 ಅಂಕ ಪಡೆದು ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಸಾಯೀಶ್ ಗೋಣಿ, 'ಪಾಲಕರ ಬೆಂಬಲ, ಶಿಕ್ಷಕರ ಪ್ರೋತ್ಸಾಹದಿಂದಲೇ ಈ ಸಾಧನೆ ಮಾಡಲು ಸಾಧ್ಯವಾಯಿತು. ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿದ್ದೆ. ರ‍್ಯಾಂಕ್ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಎಲ್ಲ ಆ ದೇವರ ದಯೆ’ ಎಂದರು. ಮುಂದುವರೆದು, ‘ವೈದ್ಯಕೀಯ ಶಿಕ್ಷಣ ಪಡೆಯಲು ಇಚ್ಛೆ ಹೊಂದಿದ್ದೇನೆ. ನೀಟ್ ಪರೀಕ್ಷೆಗಾಗಿ ತಯಾರಿ ನಡೆಸಿದ್ದೇನೆ. ತಂದೆ ಗುರುಪ್ರಸಾದ ಅವರು ಆಟೊಮೊಬೈಲ್ ಬಿಡಿಭಾಗಗಳ ಮಾರಾಟಗಾರರಾಗಿದ್ದಾರೆ. ತಾಯಿ ಶಶಿಕಲಾ ಗೃಹಿಣಿಯಾಗಿದ್ದಾರೆ’ ಎಂದರು.
ರ‍್ಯಾಂಕ್ ಹೋಲ್ಡರ್ಸ್: ಸುದ್ದಿಗೋಷ್ಠಿ ನಡೆಸಿದ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೀಶ್ ಸಿಂಗ್ ಹಾಗೂ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷ ರಾಮಚಂದ್ರನ್ ಅವರು ಇಂದು ಬೆಳಗ್ಗೆ ಫಲಿತಾಂಶ ಪ್ರಕಟಿಸಿದ್ದು ಟಾಪರ್ಸ್ಗಳ ವಿವರವನ್ನು ನೀಡಿದರು. ಕಲಾ ವಿಭಾಗದಲ್ಲಿ ಬೆಂಗಳೂರಿನ ಜಯನಗರದಲ್ಲಿರುವ ಎನ್ಎಂಕೆಆರ್ವಿ ಕಾಲೇಜಿನ ವಿದ್ಯಾರ್ಥಿನಿ ತಬಸುಂ ಶೇಖ್ 593 ಅಂಕ ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಮೂಡಬಿದರೆಯ ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಅನನ್ಯ ಕೆ.ಎ 600 ಕ್ಕೆ 600 ಅಂಕ ಪಡೆದುಕೊಂಡು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಕೋಲಾರದ ಗಂಗೋತ್ರಿ ಕಾಲೇಜಿನ ವಿದ್ಯಾರ್ಥಿ ಕೌಶಿಕ್ 600 ಕ್ಕೆ 596 ಅಂಕ ಪಡೆದಿದ್ದು, ಜಯನಗರ ಆರ್ವಿ ಕಾಲೇಜಿನ ಸುರಭಿ ಎಸ್ 596 ಅಂಕ ಇಬ್ಬರು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಜೊತೆಗೆ, 1,09,509 ವಿದ್ಯಾರ್ಥಿಗಳು ಶೇ.85 ಕ್ಕಿಂತ ಹೆಚ್ಚು ಅಂಕ ಪಡೆದರೇ, 2,47,315 ವಿದ್ಯಾರ್ಥಿಗಳು ಶೇ.60, 90,014 ವಿದ್ಯಾರ್ಥಿಗಳು ಶೇ.50, 77,371 ವಿದ್ಯಾರ್ಥಿಗಳು ಶೇ.35 ಕ್ಕಿಂತ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಉತ್ತೀರ್ಣ ಹಂತದಲ್ಲಿ ಅನುತ್ತೀರ್ಣ ಆಗಿರುವ 15 ಸಾವಿರ ಮಕ್ಕಳಿಗೆ ಎರಡು ವಿಷಯಗಳಿಗೆ ತಲಾ ಐದು ಅಂಕದ ಗ್ರೇಸ್ ಮಾರ್ಕ್ಸ್ ಕೊಡಲಾಗುತ್ತದೆ ಎಂದು ರಿತೀಶ್ ಸಿಂಗ್ ಹಾಗೂ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷ ರಾಮಚಂದ್ರನ್ ತಿಳಿಸಿದ್ದಾರೆ.
ಸರ್ಕಾರಿ ಪಿಯು ಕಾಲೇಜಿನಲ್ಲಿ 42 ಕಾಲೇಜು ಶೇ.100 ರಷ್ಟು ಫಲಿತಾಂಶ ಪಡೆದಿದ್ದು, ಯಾವುದೇ ಕಾಲೇಜು ಶೂನ್ಯ ಫಲಿತಾಂಶ ಪಡೆದುಕೊಂಡಿಲ್ಲ ಎನ್ನುವ ಮಾಹಿತಿ ನೀಡಿದ್ದು, ಅನುದಾನಿತ ಪಿಯು ಕಾಲೇಜಿನಲ್ಲಿ 10 ಶೇ. 100 ರಷ್ಟು ಫಲಿತಾಂಶ 5 ಶೂನ್ಯ ಫಲಿತಾಂಶ, ಅನುದಾನ ರಹಿತ ಪಿಯು ಕಾಲೇಜಿನಲ್ಲಿ 264 ಕಾಲೇಜು ಶೇ.100 ಫಲಿತಾಂಶ, 73 ಕಾಲೇಜು ಶೂನ್ಯ ಫಲಿತಾಂಶ ಪಡೆದುಕೊಂಡಿವೆ.
ಇದನ್ನೂ ಓದಿ: ರಾಜ್ಯದಲ್ಲಿಯೇ 600ಕ್ಕೆ 600 ಅಂಕ ಪಡೆದು ಪ್ರಥಮ ಸ್ಥಾನ ಪಡೆದ ಕೊಡಗಿನ ಕುವರಿ ಅನನ್ಯ