ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಹಲವು ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಕಾಮಗಾರಿ ಆರಂಭವಾಗಿ ನಾಲ್ಕು ವರ್ಷ ಕಳೆದರೂ ಕೂಡ ಕಾಮಗಾರಿ ಪೂರ್ಣಗಳ್ಳುವ ಲಕ್ಷಣಗಳು ಮಾತ್ರ ಕಾಣುತ್ತಿಲ್ಲ.
ಭಾರೀ ನಿರೀಕ್ಷೆಯೊಂದಿಗೆ ಆರಂಭಿಸಿದ್ದ ಗದಗ ರಸ್ತೆ -ಅಂಚಟಗೇರಿವರೆಗಿನ ಚತುಷ್ಪಥ ಕಾಂಕ್ರೀಟ್ ರಸ್ತೆ ಕಾಮಗಾರಿ ಸ್ಥಗಿತಗೊಂಡಿದ್ದು, ಸದ್ಯಕ್ಕೆ ಪುನಾರಂಭಗೊಳ್ಳುವ ಲಕ್ಷಣಗಳು ಸದ್ಯಕ್ಕೆ ಕಾಣಿಸುತ್ತಿಲ್ಲ. ರಸ್ತೆಯ ಹೊಸ ಬ್ರಿಡ್ಜ್ನಿಂದ ರೈಲ್ವೆ ವರ್ಕ್ಶಾಪ್, ರೈಲ್ವೆ ಬ್ರಿಡ್ಜ್, ಲ್ಯಾಮಿಂಗ್ಟನ್ ರಸ್ತೆ, ಚೆನ್ನಮ್ಮ ಸೃರ್ಕಲ್, ಬಾಸೆಲ್ ಮಿಶನ್ ಚರ್ಚ್, ಕಾರವಾರ ರಸ್ತೆ, ಇಂಡಿಪಂಪ್ ಸರ್ಕಲ್ ಮಾರ್ಗವಾಗಿ ಅಂಚಟಗೇರಿವರೆಗೆ 13 ಕಿಲೋ ಮೀಟರ್ ರಸ್ತೆಯನ್ನು ಚತುಷ್ಪತ ಹೆದ್ದಾರಿಯನ್ನಾಗಿ ಪರಿವರ್ತಿಸಿ ಕಾಂಕ್ರೀಟ್ ರಸ್ತೆ ನಿರ್ಮಿಸುವ ಯೋಜನೆ ಇದಾಗಿದ್ದು, ಕಾಮಗಾರಿ ಕುಂಟುತ್ತಾ ಸಾಗಿದೆ.
2018ರ ಲೋಕಸಭೆ ಚುನಾವಣೆ ವೇಳಾಪಟ್ಟಿ ಪ್ರಕಟಗೊಳ್ಳಲಿದೆ ಎಂಬ ಕಾರಣಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ 2018ರ ಮಾರ್ಚ್ ತಿಂಗಳಲ್ಲಿ ಗಿರಣಿ ಚಾಳ್ ಮತ್ತು ಗದಗ ರಸ್ತೆ ಬ್ರಿಡ್ಜ್ ಬಳಿ ಒಂದೇ ದಿನ ಎರಡೂ ಕಡೆಗಳಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದ್ದರು. 123 ಕೋಟಿರೂ. ವೆಚ್ಚದಲ್ಲಿ ದ್ವಿಪಥವನ್ನು ಚತುಷ್ಪಥವನ್ನಾಗಿ ಪರಿವರ್ತಿಸುವ ಯೋಜನೆಯಾಗಿದ್ದು, ಎರಡು ವರ್ಷಗಳಲ್ಲಿ (2020) ಪೂರ್ಣಗೊಳ್ಳಲಿದೆ. ಈ ಹೆದ್ದಾರಿ ಅಗಲೀಕರಣದಿಂದ ಸುಗಮ, ಸುರಕ್ಷಿತ ಸಂಚಾರ ದೊರೆಯಲಿದೆ ಎಂದು ಹೇಳಿದ್ದರು.
ಲೋಕಸಭೆ ಚುನಾವಣೆ ನೀತಿ ಸಂಹಿತೆ ಮಧ್ಯೆಯೇ ಅಂಚಟಗೇರಿ ಮತ್ತು ಗದಗ ರಸ್ತೆ ಬ್ರಿಡ್ಜ್ ಬಳಿ ಹಾಗೂ ಕಾರವಾರ ರಸ್ತೆಯ ರಾಜ ನಾಲಾದಲ್ಲಿ ಬ್ರಿಡ್ಜ್ ಅಗಲೀಕರಣಗೊಳಿಸುವ ಕಾಮಗಾರಿಯನ್ನು ಭರದಿಂದ ಏಕಕಾಲಕ್ಕೆ ಕೈಗೆತ್ತಿಕೊಳ್ಳಲಾಯಿತು. ಏಪ್ರಿಲ್, ಮೇ ಮತ್ತು ಜೂನ್ ಹಾಗೂ ಜುಲೈ ಮಧ್ಯಭಾಗದವರೆಗೆ ಶರವೇಗದಲ್ಲಿ ಜರುಗಿದ ಕಾಮಗಾರಿಯು ಅಷ್ಟೇ ವೇಗದಲ್ಲಿ ಹಠಾತ್ ಸ್ಥಗಿತಗೊಂಡಿತು.
ಇದಕ್ಕೆ ನಿರಂತರ ಮಳೆ ಕಾರಣ ನೆಪವೊಡ್ಡಿ ಕೆಲಸ ನಿಲ್ಲಿಸಲಾಯಿತು. ಇದಾದ ಬಳಿಕ ಕಾಮಗಾರಿಯು ಪುನಾರಂಭಿಸಲಾಯಿತಾದರೂ 2020 ಜನವರಿ ತಿಂಗಳ ವೇಳೆ ಮತ್ತೆ ಸ್ಥಗಿತಗೊಂಡಿತು. ಅಲ್ಲಿಂದ ಇಲ್ಲಿಯವರೆಗೆ ಚತುಷ್ಪಥ ಹೆದ್ದಾರಿ ಕೆಲಸ ಬಹುತೇಕ ನಿಂತುಹೋಗಿದೆ.
ಅಗೆದ ರಸ್ತೆ, ಅರ್ಧಂಬರ್ಧ ಕಾಮಗಾರಿಯ ಪರಿಣಾಮ ರಸ್ತೆಯೆಲ್ಲ ಕೆಸರುಮಯವಾಗಿದ್ದು, ಸಂಚಾರ ಕಷ್ಟವಾಗಿದೆ. ಸಾಕಷ್ಟು ಅಪಘಾತಗಳು ಸಂಭವಿಸಿವೆ. ಹೀಗಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.