ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಜನರ ಮತ ಪಡೆದ ಮೂರು ಪಕ್ಷಗಳು ಉತ್ತರ ಕರ್ನಾಟಕ ಭಾಗದ ಜನರಿಗೆ ಮೋಸ ಮಾಡುತ್ತಿವೆ. ಸುವರ್ಣ ಸೌಧಕ್ಕೆ ಕಚೇರಿಗಳ ಸ್ಥಳಾಂತರ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ ಸೋಬರದಮಠ ಆರೋಪಿಸಿದರು.
ನಗರದಲ್ಲಿಂದು ಮಾತನಾಡಿದ ಅವರು, ನಂಜುಂಡಪ್ಪ ವರದಿಯಂತೆ 2018ನೇ ಸಾಲಿನ ಸಮ್ಮಿಶ್ರ ಸರ್ಕಾರ 9 ಇಲಾಖೆಗಳನ್ನು ಬೆಳಗಾವಿ ಸುವರ್ಣ ಸೌಧಕ್ಕೆ ಸ್ಥಳಾಂತರ ಮಾಡಿ ಆದೇಶ ಮಾಡಲಾಗಿತ್ತು. ಆದ್ರೆ ಇಂದಿನ ರಾಜ್ಯ ಸರ್ಕಾರ ರೈತರಿಗೆ ಅನುಕೂಲವಾಗಿರುವ ಧಾರವಾಡ ಜಿಲ್ಲೆಯಲ್ಲಿರುವ ಇಲಾಖೆಗಳನ್ನು ಸುವರ್ಣ ಸೌಧಕ್ಕೆ ಸ್ಥಳಾಂತರ ಮಾಡುವ ಮೂಲಕ ರಾಜ್ಯ ಮಟ್ಟದ 9 ಇಲಾಖೆಗಳನ್ನು ಬೆಂಗಳೂರಿನಲ್ಲಿಯೇ ಉಳಿಸಿಕೊಂಡು ನಂಬರ್ 75ರ ಫೈಲ್ ಮುಚ್ಚಿ ಹಾಕುವ ಹುನ್ನಾರವನ್ನು ಮೂರೂ ಪಕ್ಷಗಳು ಮಾಡುತ್ತಿವೆ ಎಂದು ಆರೋಪಿಸಿದರು.
ಸುವರ್ಣ ಸೌಧಕ್ಕೆ ಕಚೇರಿಗಳ ಸ್ಥಳಾಂತರ ಮಾಡುವುದರಿಂದ 400 ಕೋಟಿ ರೂ. ಖರ್ಚು ತಗ್ಗಿಸಬಹುದು. ಈ ದಿಸೆಯಲ್ಲಿ 9 ಇಲಾಖೆಗಳನ್ನು ಸ್ಥಳಾಂತರ ಮಾಡುವವರೆಗೂ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.