ಹುಬ್ಬಳ್ಳಿ: ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೂ ಈ ಬಾರಿ ಕೊರೊನಾ ಅಡ್ಡಗಾಲು ಹಾಕಿದೆ. ಯಾವುದೇ ಸಾರ್ವಜನಿಕ ಗಣೇಶೋತ್ಸವ ನಡೆಸದಂತೆ ಜಿಲ್ಲಾಡಳಿತ ನಿಷೇಧ ಹೇರಿದ್ದು, ಈ ಕುರಿತಂತೆ ಕೆಲವು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವಳಿ ನಗರದ ಪೊಲೀಸರು ಗಣೇಶ ಮಂಡಳಿಗಳಿಗೆ ಸೂಚನೆ ನೀಡಿದ್ದಾರೆ.
ಕೋವಿಡ್ ಸೋಂಕು ಹರಡು ಭೀತಿ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಿಷೇಧ ಹೇರಲಾಗಿದೆ. ಗಣೇಶ ಮಂಡಳಿ ವ್ಯಾಪ್ತಿಯ ದೇವಸ್ಥಾನಗಳಲ್ಲಿ 5 ಜನರನ್ನು ಒಳಗೊಂಡು ಪ್ರತಿಷ್ಠಾಪಿಸಲು ಅವಕಾಶ ಕಲ್ಪಿಸಲಾಗಿದೆ. ಯಾವುದೇ ಪಿಒಪಿ ಗಣೇಶ ಸ್ಥಾಪನೆಗೆ ಅವಕಾಶವಿಲ್ಲ ಎಂದು ಸೂಚಿಸಿದೆ.
ಸಾರ್ವಜನಿಕ ಮೆರವಣಿಗೆ, ಡಿಜೆ, ಧ್ವನಿವರ್ಧಕ ಹಾಗೂ ಸಿಡಿಮದ್ದುಗಳಿಗೆ ಅವಕಾಶವಿಲ್ಲ. ಬೇರೆ ರಾಜ್ಯ ಹಾಗೂ ಬೇರೆ ಜಿಲ್ಲೆಗಳಿಂದ ಪಿಒಪಿ ಗಣೇಶ ತರುವಂತಿಲ್ಲ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.