ಹುಬ್ಬಳ್ಳಿ: ಕೊಲ್ಲಾಪುರ ಹೊರವಲಯದಲ್ಲಿ ಶಿವಸೇನೆ ಕಾರ್ಯಕರ್ತರು ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ್ದನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆಯಿಂದ ಇಂದು ಹುಬ್ಬಳ್ಳಿಯ ಮಿನಿವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆ ವೇಳೆ ಕನ್ನಡಕ್ಕೆ ಅಗೌರವ ತರುವ ಹಿನ್ನೆಲೆಯಲ್ಲಿ ಕೊಲ್ಲಾಪುರದಲ್ಲಿ ನಡೆದ ಕೃತ್ಯದ ವಿರುದ್ಧ ರಾಜ್ಯ ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಶಿವಸೇನೆಯವರು ಕನ್ನಡದ ಬಾವುಟವನ್ನು ಸುಟ್ಟು ಹಾಕುವ ಮೂಲಕ ವಿಕೃತಿ ಮೆರೆದಿರುವುದು ಖಂಡನೀಯ. ಪೊಲೀಸರ ಎದುರೇ ಇದೆಲ್ಲ ನಡೆದಿರೋದು ನಾಚಿಕೆಗೇಡಿನ ಸಂಗತಿ ಅಂತಾ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಕಿಡಿಕಾರಿದರು. ಕೂಡಲೇ ರಾಜ್ಯದ ಮುಖ್ಯಮಂತ್ರಿಗಳು ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಲಾಯಿತು.