ಹುಬ್ಬಳ್ಳಿ: ಆಶ್ರಯ ಮನೆ ಫಲಾನುಭವಿಗಳ ಮನವಿ ಸ್ವೀಕರಿಸಲಿಲ್ಲ ಎಂದು ಆರೋಪಿಸಿ ಫಲಾನುಭವಿಗಳು ಇಂದು ಸಿಎಂ ಬೆಂಗಾವಲು ವಾಹನ ತಡೆದು ಪ್ರತಿಭಟನೆ ನಡೆಸಿದ ಘಟನೆ ಹುಬ್ಬಳ್ಳಿಯ ಸಿಎಂ ಅವರ ಆದರ್ಶ ನಗರದ ನಿವಾಸದ ಎದುರು ನಡೆದಿದೆ.
ಜಗದೀಶ್ ನಗರ ಆಶ್ರಯ ಯೋಜನೆಯ 209 ಮನೆಗಳ ಹಂಚಿಕೆ ಹಾಗು ಹಕ್ಕು ಪತ್ರ ವಿತರಣೆ ಮಾಡುವಂತೆ ಫಲಾನುಭವಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲು ಆಗಮಿಸಿದ್ದರು. ಆದ್ರೆ ಸಿಎಂ ಅವರು ಸಮಯದ ಅಭಾವದಿಂದ ಅವರ ಮನವಿ ಸ್ವೀಕರಿಸದೇ ಮುಂದೆ ಸಾಗಿದರು. ಇದರಿಂದ ಆಕ್ರೋಶಗೊಂಡ ಜನರು ಬೆಂಗಾವಲು ವಾಹನ ತಡೆದು ಪ್ರತಿಭಟನೆ ನಡೆಸಿದರು.
ಆಗ ಡಿಸಿಪಿ ಶಹೀಲ್ ಬಾಗ್ಲಾ ಅವರು ಸಿಎಂ ಅವರ ಆಪ್ತ ಕಾರ್ಯದರ್ಶಿ ಅವರನ್ನು ಸಂಪರ್ಕಿಸಿ ನಗರದ ವಿಮಾನ ನಿಲ್ದಾಣದಲ್ಲಿ ಮನವಿ ಸ್ವೀಕರಿಸಲು ಅವಕಾಶ ಕಲ್ಪಿಸಿಕೊಟ್ಟರು. ಆಗ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡಲೇ ಫಲಾನುಭವಿಗಳಿಗೆ ಮನೆ ಹಂಚಿಕೆ ಪತ್ರ ವಿತರಿಸುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಸೂಚನೆ ನೀಡಿದರು.
ಇದನ್ನೂ ಓದಿ: ಗಂಡನ ಸಾವಿನಿಂದ ಖಿನ್ನತೆ.. ಗೃಹಿಣಿ ಆತ್ಮಹತ್ಯೆ, ಒಂದೂವರೆ ವರ್ಷದ ಮಗು ಅನಾಥ