ಹುಬ್ಬಳ್ಳಿ: ಧಾರವಾಡದ ಕೃಷಿ ವಿಶ್ವವಿದ್ಯಾಲಯ ಅವ್ಯವಸ್ಥೆಯ ಆಗರವಾಗಿದೆ. ವಿಶ್ವವಿದ್ಯಾಲಯದಲ್ಲಿ ಭ್ರಷ್ಟಾಚಾರ, ಮಹಿಳೆಯರ ಲೈಂಗಿಕ ಶೋಷಣೆ ತಾಂಡವವಾಡುತ್ತಿದೆ. ಇಲ್ಲಿರುವ ಅವ್ಯವಸ್ಥೆ ವಿರುದ್ಧ ಹಾಗೂ ಹಗರಣದ ಬಗ್ಗೆ ತನಿಖೆ ಮಾಡಬೇಕು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕೃಷಿ ವಿಶ್ವವಿದ್ಯಾಲಯ ಕುಲಪತಿಗಳ ಆಪ್ತ ಸಹಾಯಕ ಎಂ.ಎ. ಮುಲ್ಲಾ ಹಾಗೂ ಯು.ಬಿ. ಮೇಸ್ತಿ ಎಂಬುವರಿಂದ ಕೃಷಿ ವಿಶ್ವವಿದ್ಯಾಲಯ ಹದಗೆಟ್ಟು ಹೋಗಿದೆ. ರೈತರ ಹೆಸರಿನಲ್ಲಿ ಧಾರವಾಡ ಕೃಷಿ ವಿವಿ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ಇತ್ತೀಚಿಗೆ ಅಪಘಾತ ಆಯ್ತು, ಆ ಮೂಲಕ ಸಾಕಷ್ಟು ವಿಷಯ ಬಹಿರಂಗವಾಗಿದೆ. ಅದು ಅಪಘಾತವಲ್ಲ, ಅದು ರೇಪ್ ಆ್ಯಂಡ್ ಮರ್ಡರ್ ಎಂದು ಆರೋಪ ಮಾಡಿದ ಅವರು, ಬಾಗಲಕೋಟೆ ಅಂತ ಹೇಳಿ ಗೋವಾಗೆ ಒತ್ತಾಯದ ಮೂಲಕ ಯುವತಿಯರನ್ನು ಕರೆದುಕೊಂಡು ಹೋಗಲಾಗಿದೆ. ಎಂ.ಎ. ಮುಲ್ಲಾ, ಯು. ಬಿ.ಮೇಸ್ತಿ ಇವರಿಬ್ಬರು ಸೇರಿ ಯುವತಿಯರನ್ನ ಅಪಘಾತ ಮಾಡಿ ಕೊಂದಿದ್ದಾರೆ ಎಂಬ ಅನುಮಾನವಿದೆ. ಈ ಬಗ್ಗೆ ದೊಡ್ಡ ಮಟ್ಟದಲ್ಲಿ ತನಿಖೆಯಾಗಬೇಕು ಎಂದು ಮುತಾಲಿಕ್ ಆಗ್ರಹಿಸಿದರು.
ಇದನ್ನೂ ಓದಿ: ನನಗೆ ಬಿಜೆಪಿಯಿಂದ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ: ಪ್ರಮೋದ್ ಮುತಾಲಿಕ್ ವಿಶ್ವಾಸ
ಕೃಷಿ ವಿವಿಯ ವಿಸಿ ಸಹ ಗೋವಾಗೆ ಹೋಗಿದ್ದರು ಎನ್ನುವ ಮಾಹಿತಿ ಇದೆ. ಘಟನೆ ನಡೆದು 2 ತಿಂಗಳಾಗಿದೆ ಈವರೆಗೂ ಎಫ್ಐಆರ್ ಆಗಿಲ್ಲ. ಇಬ್ಬರು ಯುವತಿಯರನ್ನು ಸ್ವಹಿತಕ್ಕಾಗಿ ಬಳಸಿಕೊಂಡಿದ್ದಾರೆ. ಇಷ್ಟೆಲ್ಲಾ ಆದರೂ ಇಬ್ಬರನ್ನು ಅಮಾನತು ಮಾಡಿಲ್ಲ. ಕೃಷಿ ಆವರಣದಲ್ಲೇ ತಮಗೆ ಬೇಕಾದದ್ದನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ‘ವಿಸಿ, ಮುಲ್ಲಾ ಹಠಾವೋ ಕೃಷಿ ವಿವಿ ಬಚಾವೋ’ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಲ್ಲದೇ ಸಾವನ್ನಪ್ಪಿದ ಯುವತಿಯರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಕೊಡಬೇಕೆಂದು ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.