ಹುಬ್ಬಳ್ಳಿ: ಅಗ್ನಿಪಥ್ ಹಿಂಸಾತ್ಮಕ ಹೋರಾಟದ ಹಿಂದೆ ಪ್ರತಿಪಕ್ಷಗಳ ಪಿತೂರಿ ಇದೆ. ಕೆಲವರು ಈ ಯೋಜನೆ ಬಗ್ಗೆ ತಪ್ಪು ತಿಳುವಳಿಕೆ ಹೊಂದಿದ್ದಾರೆ. ಅಂಥವರಿಗೆ ಮನವರಿಕೆ ಮಾಡುವ ಪ್ರಯತ್ನ ನಡೆಸುತ್ತೇವೆ. ಕೆಲವರು ಟೂಲ್ ಕಿಟ್ ಇತ್ಯಾದಿ ಪ್ರಚಾರ ಮಾಡಿ ಜಗತ್ತಿನ ವಿವಿಧೆಡೆ ಅಪಪ್ರಚಾರ ಮಾಡ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.
ನಗರದಲ್ಲಿಂದು ಮಾತನಾಡಿದ ಅವರು, ಜಗತ್ತಿನ ಬೇರೆ ಬೇರೆ ದೇಶಗಳಲ್ಲಿಯೂ ಈ ವ್ಯವಸ್ಥೆ ಜಾರಿಯಲ್ಲಿದೆ. ಈ ಹಿಂದೆಯೂ ಈ ಬಗ್ಗೆ ಅನೇಕ ರೀತಿಯ ಅಧ್ಯಯನ ಮಾಡಲಾಗಿದೆ. ಸೈನ್ಯಾಧಿಕಾರಿಗಳು ಸೇನೆಯ ತಜ್ಞರು ಯೋಜನೆಗೆ ಸಮ್ಮತಿ ನೀಡಿ ಬೆಂಬಲಿಸಿದ್ದಾರೆ. ಪ್ರಯೋಗವನ್ನೇ ಮಾಡಬಾರದು ಎನ್ನುವ ದುರುದ್ದೇಶದಿಂದ ಅರಾಜಕತೆ ಸೃಷ್ಟಿ ಮಾಡಲಾಗ್ತಿದೆ ಎಂದು ಸಚಿವ ಜೋಶಿ ಹರಿಹಾಯ್ದರು.
ಅಗ್ನಿಪಥ್ ಯೋಜನೆಯಲ್ಲಿ ಸಣ್ಣ-ಪುಟ್ಟ ದೋಷಗಳಿದ್ದರೆ ಸರಿಪಡಿಸೋಣ. ಅದನ್ನು ಬಿಟ್ಟು ಹೋರಾಟದ ಹಾದಿ ತುಳಿಯೋದು ಸರಿಯಲ್ಲ. ಯಾವುದೇ ಸಾಧಕ - ಬಾಧಕ ಚರ್ಚಿಸದೇ ಇದನ್ನು ಜಾರಿಗೆ ತರುವುದಕ್ಕೆ ಮುಂದಾಗಿಲ್ಲ. ಈ ಯೋಜನೆಯಲ್ಲಿ ಸೇವೆಗೆ ಸೇರುವವರಿಗೆ ಮುಂದುವರಿಯಲೂ ಅವಕಾಶ ಇರುತ್ತೆ. ಬೇರೆ ಕಡೆಯೂ ಉದ್ಯೋಗಾವಕಾಶ ಇರುತ್ತದೆ ಎಂದು ತಿಳಿಸಿದರು.
ಯಾರು ಸೇನೆಗೆ ಹೋಗಬೇಕೋ ಅವರು ಹೋರಾಡುತ್ತಿಲ್ಲ.. ಇದನ್ನು ವಿರೋಧಿಸಿ ಹಿಂಸಾತ್ಮಕ ಹೋರಾಟದ ಹಾದಿ ಹಿಡಿದಿರುವುದು ಸರಿಯಲ್ಲ. ಇದರ ಹಿಂದೆ ಪ್ರತಿಪಕ್ಷಗಳ ಷಡ್ಯಂತ್ರವಿದೆ. ಕೇಂದ್ರ ಸರ್ಕಾರ ಏನೇ ಮಾಡಿದರೂ ಕಾಂಗ್ರೆಸ್ ಅದನ್ನು ವಿರೋಧಿಸುತ್ತಲೇ ಬರುತ್ತಿದೆ. ಕಾಂಗ್ರೆಸ್ ಕುಮ್ಮಕ್ಕಿನಿಂದ ಹಲವಾರು ಜನ ಬೀದಿಗೆ ಬಂದಿದ್ದಾರೆ. ಹೋರಾಟ ಮಾಡ್ತಿರೋರ ಪೈಕಿ ಶೇ. 90 ರಷ್ಟು ಜನ ಸೇನೆಗೆ ಸೇರುವ ಅರ್ಹತೆಯನ್ನೇ ಹೊಂದಿಲ್ಲ. ಯಾರು ಸೇನೆಗೆ ಹೋಗಬೇಕೋ ಅವರು ಹೋರಾಡುತ್ತಿಲ್ಲ. ಬದಲಿಗೆ ಬೇರೆಯವರು ಬೀದಿಗೆ ಇಳಿದು ಹೋರಾಟ ಮಾಡ್ತಿದ್ದಾರೆ.
ಲೋಪದೋಷಗಳ ತಿದ್ದುಪಡಿಗೆ ನಾವು ಸಿದ್ಧರಿದ್ದೇವೆ.. ಹಿಂಸಾತ್ಮಕ ಹೋರಾಟಕ್ಕೆ ಹೇಗೆ ಪ್ರಚೋದನೆ ಸಿಕ್ಕಿದೆ ಅನ್ನೋದನ್ನ ಮಾಧ್ಯಮಗಳು ಬಿತ್ತರಿಸಿವೆ. ಎಲ್ಲಿಯೂ ಕಮ್ಯುನಿಕೇಶನ್ ಗ್ಯಾಪ್ ಆಗಿಲ್ಲ. ಅನೇಕ ವರ್ಷಗಳಿಂದ ಇದು ಚರ್ಚೆಯಲ್ಲಿತ್ತು. ಇದೀಗ ಜಾರಿಗೆ ತರಲಾಗ್ತಿದೆ. ಲೋಪದೋಷಗಳ ತಿದ್ದುಪಡಿಗೆ ನಾವು ಸಿದ್ಧರಿದ್ದೇವೆ. ಹಾಗೆಂದು ಹಿಂಸೆಯನ್ನು ನಾವು ಸಹಿಸುವುದಿಲ್ಲ. ಹಿಂಸಾತ್ಮಕ ಹೋರಾಟದ ವಿರುದ್ಧ ಆಯಾ ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳುತ್ತವೆ ಎಂದು ಹೇಳಿದರು.
ಓದಿ: ಪ್ರತಿ ಮಂಗಳವಾರ, ಶುಕ್ರವಾರ ಪಾಲಿಕೆ ಮುಖ್ಯ ಆಯುಕ್ತರ ನಡೆ ವಲಯ ಕಚೇರಿಗಳ ಕಡೆ