ಹುಬ್ಬಳ್ಳಿ: ಹಣ ಪಾವತಿ ಮಾಡದ ಕಾರಣ ಹೆಸ್ಕಾಂ ಸಿಬ್ಬಂದಿಯು ಇಲ್ಲಿನ ಬಿಆರ್ಟಿಎಸ್ ಬಸ್ ನಿಲ್ದಾಣದಲ್ಲಿನ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿದೆ. ಇದರಿಂದ ನಿಲ್ದಾಣ ಕತ್ತಲೆಯ ಕೂಪವಾಗಿದೆ. ಸಿಬ್ಬಂದಿ ಹಾಗೂ ಪ್ರಯಾಣಿಕರು ಕತ್ತಲೆಯಲ್ಲಿಯೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ನಗರದ ರೈಲ್ವೆ ನಿಲ್ದಾಣದಲ್ಲಿರುವ ಬಿಆರ್ಟಿಎಸ್ ನಿಲ್ದಾಣದಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದು, ಸಿಬ್ಬಂದಿ ಟಾರ್ಚ್ ಬೆಳಕಿನಲ್ಲಿಯೇ ಕೆಲಸ ಮಾಡಬೇಕಿದೆ. ಬಿಆರ್ಟಿಎಸ್ ಆರಂಭವಾಗಿ ಎರಡು ವರ್ಷ ಕಳೆಯುತ್ತಾ ಬಂದರು ಸಣ್ಣ-ಪುಟ್ಟ ಕೆಲಸಗಳನ್ನು ಇನ್ನು ಬಾಕಿ ಉಳಿಸಿಕೊಂಡಿದೆ. ಹೀಗಾಗಿ ನಿರ್ವಹಣೆ ಹಂತದಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಲಾಕ್ಡೌನ್ ಸಡಿಲಿಕೆ ಬಳಿಕ ಎಂದಿನಂತೆ ಬಸ್ ಸಂಚಾರ ಆರಂಭವಾಗಿದೆ. ಆದರೂ ಬಸ್ ನಿಲ್ದಾಣದ ವಿದ್ಯುತ್ ಬಿಲ್ ಪಾವತಿಯಾಗಿಲ್ಲ. ಸುಮಾರು 4.5 ಲಕ್ಷ ರೂ. ಬಿಲ್ ಬಾಕಿ ಉಳಿಸಿಕೊಂಡಿದ್ದರಿಂದ ವಿದ್ಯುತ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ.
ಈ ನಿಲ್ದಾಣದಿಂದ ನಿತ್ಯ 144 ಬಸ್ಗಳು ಸಂಚರಿಸುತ್ತವೆ. 4-5 ಸಾವಿರ ಪ್ರಯಾಣಿಕರು ಓಡಾಡುತ್ತಾರೆ. ನಿತ್ಯ 45-50 ಸಾವಿರ ಆದಾಯವಿದೆ. ಆದರೂ ಮೂರು ತಿಂಗಳ ವಿದ್ಯುತ್ ಬಿಲ್ ಕಟ್ಟಲು ಬಿಆರ್ಟಿಎಸ್ಗೆ ಸಾಧ್ಯವಾಗಿಲ್ಲ. ಇದರಿಂದ ಕತ್ತಲೆಯಲ್ಲಿ ಪ್ರಯಾಣಿಸುವಂತಾಗಿದೆ ಎನ್ನುತ್ತಾರೆ ಸ್ಥಳೀಯರು.