ಹುಬ್ಬಳ್ಳಿ: ದೇಶಾದ್ಯಂತ ಕುತೂಹಲ ಕೆರಳಿಸಿದ್ದ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣವನ್ನು ಬೇಧಿಸುವಲ್ಲಿ ರಾಜ್ಯದ ಎಸ್ಐಟಿ ತಂಡಕ್ಕೆ ಸಹಕಾರವನ್ನು ನೀಡಿದ್ದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಘಟಕದ ಬಿಡಿಡಿಎಸ್(ಸ್ಫೋಟಕ ಪತ್ತೆ ಮತ್ತು ನಿಷ್ಕ್ರಿಯ ದಳ) ತಂಡದ ಅಧಿಕಾರಿ ಮತ್ತು ಸಿಬ್ಬಂದಿಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಬಹುಮಾನ ಘೋಷಣೆ ಮಾಡಿದ್ದಾರೆ.
ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಬಿಡಿಡಿಎಸ್ ತಂಡದ 8 ಜನ ಸಿಬ್ಬಂದಿಗಳಾದ ಆರ್ ಎಫ್ ಮುಂತೇಶ, ಸಿ ಬಿ ಜಗದ, ಎನ್ ಜಿ ತೋಪಲಕಟ್ಟಿ, ಎನ್ ಎಸ್ ಇಂಗಳಗಿ, ಡಿ ವಾಯ್ ಭೋವಿ, ಎಮ್ ಪಿ ಔದಕ್ಕನವರ, ಎಮ್ ಆರ್ ಮಹಳ್ಳಿ ಹಾಗೂ ಎಮ್ ಕೆ ಕೋನಿ ಇವರಲ್ಲರಿಗೂ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಪ್ರಶಂಸನಾ ಪತ್ರ ಮತ್ತು ಬಹುಮಾನ ಘೋಷಣೆ ಮಾಡಿದ್ದಾರೆ.
ಸಿಎಆರ್ ಸಿಬ್ಬಂದಿ ಕಾರ್ಯ ವೈಖರಿ ಮೆಚ್ಚಿ, ಪೊಲೀಸ್ ಮಹಾ ನಿರ್ದೇಶಕರು ಹಾಗೂ ಬೆಂಗಳೂರು ಪೊಲೀಸ್ ಮಹಾ ನಿರೀಕ್ಷಕರು ಪ್ರಶಂಸನಾ ಪತ್ರಗಳನ್ನು ನೀಡಿದ್ದು, ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರು ಸಹ ಇವರ ಕಾರ್ಯ ಶ್ಲಾಘಿಸಿ, ಸೂಕ್ತ ಬಹುಮಾನವನ್ನು ಘೋಷಿಸಿ, ಪ್ರಶಂಸನಾ ಪತ್ರಗಳನ್ನು ವಾರದ ಕವಾಯತಿನಲ್ಲಿ ನೀಡಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.