ಹುಬ್ಬಳ್ಳಿ: ನಗರದ ಎಪಿಎಂಸಿಯ ತರಕಾರಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸಾವಿರಾರು ಜನರು ಸೇರಿ ಲಾಕ್ಡೌನ್ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಎಪಿಎಂಸಿ ಠಾಣೆಯ ಪೊಲೀಸರು 15 ಜನ ದಲ್ಲಾಳಿಗಳನ್ನು ವಶಕ್ಕೆ ಪಡೆದಿದ್ದಾರೆ.
ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಬೆಳಗಿನ ಜಾವದಲ್ಲಿ ತರಕಾರಿ ಖರೀದಿಸಲು ಸಾವಿರಾರು ಜನರು ಸೇರಿದ್ದು, ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಲಾಕ್ಡೌನ್ ಉಲ್ಲಂಘಿಸಿ ಖರೀದಿದಾರರು, ದಲ್ಲಾಳಿಗಳು, ಗುಂಪು ಗುಂಪಾಗಿ ಸೇರಿ ಚೌಕಟ್ಟಿನ ಚಿಂತೆಯಿಲ್ಲದೆ ವ್ಯವಹಾರ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು 15 ಜನ ದಲ್ಲಾಳಿಗಳನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಮಹಾನಗರದ ಪಾಲಿಕೆ ಮತ್ತು ಎಪಿಎಂಸಿ ವತಿಯಿಂದ ವಾರ್ಡ್ ವಾರು ವ್ಯಾಪಾರಿಗಳಿಗೆ ಹಾಗೂ ದಲ್ಲಾಳಿಗಳಿಗೆ ಒಟ್ಟು 1300 ಪಾಸ್ ವಿತರಿಸಿದ್ದರೂ ಕೂಡ ಬೆಳ್ಳಂಬೆಳಗ್ಗೆ ಎಲ್ಲಾ ವ್ಯಾಪಾರಸ್ಥರು ಒಟ್ಟಿಗೆ ಸೇರಿದ್ದರಿಂದ ಅಂತರವಿಲ್ಲದ ಜನದಟ್ಟಣೆ ಉಂಟಾಗಿತ್ತು.
ಸ್ಥಳೀಯ ಪೊಲೀಸರು ಎಷ್ಟೇ ಬುದ್ಧಿ ಹೇಳಿದರೂ ಜನದಟ್ಟಣೆ ಹತ್ತಿಕ್ಕಲು ಪ್ರಯತ್ನಿಸಿದರೂ ವ್ಯಾಪಾರಸ್ಥರು ಕಿವಿಗೊಡಲಿಲ್ಲ. ಆಗ 15 ಮಂದಿ ದಲ್ಲಾಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.