Indian Satellite Spacex Launched: ಭಾರತದಿಂದ ಸಾವಿರಾರು ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಅಮೆರಿಕದ ಫ್ಲೋರಿಡಾದಲ್ಲಿ ಎಲಾನ್ ಮಸ್ಕ್ ಅವರ ರಾಕೆಟ್ ನಮ್ಮ ದೇಶದ ಅತ್ಯಾಧುನಿಕ ಸಂವಹನ ಉಪಗ್ರಹವನ್ನು ಹೊತ್ತೊಯ್ದಿದೆ. ಮಸ್ಕ್ ಅವರ ಏಜೆನ್ಸಿ ಸ್ಪೇಸ್‌ಎಕ್ಸ್ 34 ನಿಮಿಷಗಳ ಪ್ರಯಾಣದ ನಂತರ ಇಸ್ರೋದ ಉಪಗ್ರಹವನ್ನು ಸುರಕ್ಷಿತವಾಗಿ ಬಾಹ್ಯಾಕಾಶಕ್ಕೆ ಸಾಗಿಸಿತು. ಇದು ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್‌ನ 396 ನೇ ಹಾರಾಟವಾಗಿರುವುದು ಗಮನಾರ್ಹ.
SpaceX ಭಾರತಕ್ಕಾಗಿ ಇಂತಹ ಉಡಾವಣೆ ಮಾಡಿರುವುದು ಇದೇ ಮೊದಲು. ಇದನ್ನು ಅಮೆರಿಕದ ಫ್ಲೋರಿಡಾದ ಕೇಪ್ ಕೆನವೆರಲ್‌ನಿಂದ ಉಡಾವಣೆ ಮಾಡಲಾಯಿತು. ಸೋಮವಾರ-ಮಂಗಳವಾರ ಮಧ್ಯರಾತ್ರಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದ ಅತ್ಯಂತ ಅದ್ಭುತವಾದ ಸಂವಹನ ಉಪಗ್ರಹವನ್ನು ಎಲೋನ್ ಮಸ್ಕ್ ಅವರ ಕಂಪನಿ ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್‌ನಿಂದ ಉಡಾವಣೆ ಮಾಡಲಾಯಿತು. ಈ ಉಪಗ್ರಹವು ದೂರದ ಪ್ರದೇಶಗಳಲ್ಲಿ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಮತ್ತು ಪ್ರಯಾಣಿಕ ವಿಮಾನಗಳಲ್ಲಿ ವಿಮಾನದಲ್ಲಿ ಇಂಟರ್ನೆಟ್ ಸೇವೆಯನ್ನು ಒದಗಿಸಲು ಸಹಾಯ ಮಾಡುತ್ತದೆ.
Liftoff of GSAT-N2! pic.twitter.com/4JqOrQINzE
— SpaceX (@SpaceX) November 18, 2024
ಉಡಾವಣೆ ಯಶಸ್ವಿಯಾಗಿದೆ ಎಂದು ಇಸ್ರೋದ ವಾಣಿಜ್ಯ ವಿಭಾಗ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್‌ನ ಅಧ್ಯಕ್ಷ ಮತ್ತು ಎಂಡಿ ರಾಧಾಕೃಷ್ಣನ್ ಡಿ. ಅವರು ಹೇಳಿದ್ದಾರೆ. ಜಿಸ್ಯಾಟ್ ಪರಿಪೂರ್ಣ ಕಕ್ಷೆಯನ್ನು ತಲುಪಿದೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.
GSAT N-2 ಅಥವಾ GSAT 20 ಹೆಸರಿನ ಈ ವಾಣಿಜ್ಯ ಉಪಗ್ರಹವು 4700 ಕೆಜಿ ಹೊಂದಿದೆ. ಇದನ್ನು ಕೇಪ್ ಕೆನವೆರಲ್‌ನಲ್ಲಿರುವ ಸ್ಪೇಸ್ ಕಾಂಪ್ಲೆಕ್ಸ್ 40 ರಿಂದ ಉಡಾವಣೆ ಮಾಡಲಾಯಿತು. ಈ ಲಾಂಚ್ ಪ್ಯಾಡ್ ಅನ್ನು ಅಮೆರಿಕ ಸ್ಪೇಸ್ ಫೋರ್ಸ್ನಿಂದ SpaceX ಬಾಡಿಗೆಗೆ ಪಡೆದುಕೊಂಡಿದೆ. ಅಮೆರಿಕದ ಬಾಹ್ಯಾಕಾಶ ಹಿತಾಸಕ್ತಿಗಳನ್ನು ರಕ್ಷಿಸಲು 2019 ರಲ್ಲಿ ಬಾಹ್ಯಾಕಾಶ ಪಡೆ ರಚನೆಯಾಯಿತು.
Deployment of @NSIL_India GSAT-N2 confirmed pic.twitter.com/AHYjp9Zn6S
— SpaceX (@SpaceX) November 18, 2024
ಮಿಷನ್‌ನ ಜೀವಿತಾವಧಿ 14 ವರ್ಷಗಳು ಮತ್ತು ಉಪಗ್ರಹವನ್ನು ಬೆಂಬಲಿಸಲು ನೆಲದ ಮೂಲಸೌಕರ್ಯ ಸಿದ್ಧವಾಗಿದೆ ಎಂದು ಇಸ್ರೋ ಅಧ್ಯಕ್ಷ ಡಾ. ಎಸ್. ಸೋಮನಾಥ್ ಹೇಳಿದ್ದಾರೆ. ಅವರು ಬೆಂಗಳೂರಿನ ಯುಆರ್ ರಾವ್ ಉಪಗ್ರಹ ಕೇಂದ್ರದಿಂದ ಈ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದರು. ಉಪಗ್ರಹವು ಉತ್ತಮ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಸೌರ ಫಲಕಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನ ಯು.ಆರ್. ರಾವ್ ಉಪಗ್ರಹ ಕೇಂದ್ರದ ನಿರ್ದೇಶಕ ಡಾ. ಎಂ. ಶಂಕರನ್ ಮಾತನಾಡಿ, ಒಮ್ಮೆ ಈ ಸ್ವದೇಶಿ ಉಪಗ್ರಹ ಕಾರ್ಯಾರಂಭ ಮಾಡಿದರೆ ಇದು ವಿಶ್ವ ಅಂತರ್ಜಾಲ ನಕ್ಷೆಯಲ್ಲಿ ಭಾರತದಲ್ಲಿನ ವಿಮಾನದಲ್ಲಿ ಇಂಟರ್ನೆಟ್ ಸಂಪರ್ಕದ ಪ್ರಮುಖ ಅಂತರವನ್ನು ತುಂಬಲಿದೆ. ಇದು ಭಾರತದ ಅತ್ಯಂತ ಸಮರ್ಥ ಉಪಗ್ರಹವಾಗಿದೆ. ಬಹುಶಃ ಬಹುನಿರೀಕ್ಷಿತ ಕಾ-ಬ್ಯಾಂಡ್‌ನಲ್ಲಿ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವ ಏಕೈಕ ಉಪಗ್ರಹವಾಗಿದೆ ಎಂದು ಹೇಳಿದರು.
GSAT-N2 ವೈಶಿಷ್ಟ್ಯಗಳು:
GSAT-20 ಉಪಗ್ರಹವನ್ನು ದೂರದ ಪ್ರದೇಶಗಳಲ್ಲಿ ಸಂವಹನ ವ್ಯವಸ್ಥೆಯನ್ನು ಸುಧಾರಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಮೂಲಭೂತವಾಗಿ ದೂರದ ಪ್ರದೇಶಗಳಿಗೆ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೌಲಭ್ಯವನ್ನು ಒದಗಿಸುತ್ತದೆ. ಈ ಉಪಗ್ರಹವು 48Gpbs ವೇಗದಲ್ಲಿ ಇಂಟರ್ನೆಟ್ ಅನ್ನು ನೀಡುತ್ತದೆ.
ಈ ಉಪಗ್ರಹವು ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ ಮತ್ತು ಲಕ್ಷದ್ವೀಪ ಸೇರಿದಂತೆ ಭಾರತದ ದೂರದ ಪ್ರದೇಶಗಳಿಗೆ ಸಂವಹನ ಸೇವೆಯನ್ನು ಒದಗಿಸುತ್ತದೆ.
ಇದು 32 ನ್ಯಾರೋ ಸ್ಪಾಟ್ ಬೀಮ್ಸ್ ಹೊಂದಿರುತ್ತದೆ. 8 ಬೀಮ್ಸ್ ಈಶಾನ್ಯ ಪ್ರದೇಶಕ್ಕೆ, 24 ವೈಡ್ ಬೀಮ್ಸ್ ಭಾರತದ ಉಳಿದ ಭಾಗಗಳಿಗೆ ಸಮರ್ಪಿಸಲಾಗಿದೆ. ಈ 32 ಬೀಮ್ಸ್ ಭಾರತದ ಭೂಪ್ರದೇಶದಲ್ಲಿರುವ ಹಬ್ ಸ್ಟೇಷನ್‌ಗಳಿಂದ ಸಪೋರ್ಟ್ ಪಡೆಯುತ್ತವೆ. ಕಾ-ಬ್ಯಾಂಡ್ ಹೈ-ಥ್ರೂಪುಟ್ ಸಂವಹನ ಪೇಲೋಡ್ ಸಾಮರ್ಥ್ಯವು ಪ್ರತಿ ಸೆಕೆಂಡಿಗೆ ಸರಿಸುಮಾರು 48 GB ಆಗಿದೆ. ಇದು ದೇಶದ ದೂರದ ಹಳ್ಳಿಗಳನ್ನು ಇಂಟರ್ನೆಟ್‌ಗೆ ಸಂಪರ್ಕಿಸುತ್ತದೆ.
ಶೇಕಡ 80ರಷ್ಟು GSAT-N ಸಾಮರ್ಥ್ಯವನ್ನು ಖಾಸಗಿ ಕಂಪನಿಗೆ ಮಾರಾಟ ಮಾಡಲಾಗಿದೆ. ಉಳಿದ ಶೇಕಡ 20ರಷ್ಟು ವಿಮಾನಯಾನ ಮತ್ತು ಸಾಗರ ವಲಯಗಳಲ್ಲಿ ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತದೆ.
ಈ ಉಪಗ್ರಹವು ಕೇಂದ್ರದ 'ಸ್ಮಾರ್ಟ್ ಸಿಟಿ' ಉಪಕ್ರಮಕ್ಕೆ ಉತ್ತೇಜನ ನೀಡುತ್ತದೆ. ವಿಮಾನದಲ್ಲಿ ಇಂಟರ್ನೆಟ್ ಸಂಪರ್ಕವನ್ನು ಅನುಕೂಲಕರವಾಗಿಸಲು ಇದು ಸಹಾಯ ಮಾಡುತ್ತದೆ.
ಸ್ಪೇಸ್ ಎಕ್ಸ್ ಮೂಲಕ ಇಸ್ರೋ ಉಡಾವಣೆ ಮಾಡಿದ್ದು ಏಕೆ?
ಪ್ರಸ್ತುತ ಭಾರತೀಯ ರಾಕೆಟ್‌ಗಳು 4 ಟನ್‌ಗಿಂತ ಹೆಚ್ಚು ತೂಕದ ಉಪಗ್ರಹಗಳನ್ನು ಉಡಾವಣೆ ಮಾಡುವ ಸಾಮರ್ಥ್ಯವನ್ನು ಹೊಂದಿಲ್ಲ. ಆದ್ದರಿಂದ ಇಸ್ರೋ ಎಲೋನ್ ಮಸ್ಕ್ ಅವರ ಬಾಹ್ಯಾಕಾಶ ಸಂಸ್ಥೆಯೊಂದಿಗೆ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದೆ. ಈ ಹಿಂದೆ ಇಸ್ರೋ ಭಾರವಾದ ಉಪಗ್ರಹಗಳನ್ನು ಉಡಾವಣೆ ಮಾಡಲು ಫ್ರಾನ್ಸ್‌ನ ಏರಿಯನ್ ಸ್ಪೇಸ್ ಕನ್ಸೋರ್ಟಿಯಂ ಅನ್ನು ಅವಲಂಬಿಸಿತ್ತು.
ಎಲೋನ್ ಮಸ್ಕ್ 2002 ರಲ್ಲಿ ಬಾಹ್ಯಾಕಾಶ ಸಾರಿಗೆ ಸೇವಾ ಕಂಪನಿ SpaceX ಅನ್ನು ಸ್ಥಾಪಿಸಿದರು. ಲಿಕ್ವಿಡ್ ಪ್ರೊಪೆಲ್ಲಂಟ್ ರಾಕೆಟ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ ಮೊದಲ ಖಾಸಗಿ ಕಂಪನಿ ಇದಾಗಿದೆ. ಸ್ಪೇಸ್‌ಎಕ್ಸ್ 2008 ರಲ್ಲಿ ಫಾಲ್ಕನ್-1 ರಾಕೆಟ್ ಅನ್ನು ಉಡಾವಣೆ ಮಾಡಿತು.
ವಿಮಾನಗಳಲ್ಲಿ ಇಂಟರ್ನೆಟ್ ನಿಯಮಗಳು:
ಅಂತಾರಾಷ್ಟ್ರೀಯ ವಿಮಾನಗಳು ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸಿದಾಗ ಅವರು ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಬೇಕಾಗುತ್ತದೆ. ಏಕೆಂದರೆ ಭಾರತವು ಈ ಸೇವೆಯನ್ನು ಅನುಮತಿಸುವುದಿಲ್ಲ. ಆದರೆ, ಇತ್ತೀಚೆಗೆ ಭಾರತವು ವಿಮಾನಗಳ ಸಮಯದಲ್ಲಿ ದೇಶದಲ್ಲಿ ಇಂಟರ್ನೆಟ್ ಸೌಲಭ್ಯವನ್ನು ಒದಗಿಸಲು ನಿಯಮಗಳನ್ನು ತಿದ್ದುಪಡಿ ಮಾಡಿದೆ. ಹೊಸ ನಿಯಮಗಳ ಪ್ರಕಾರ, 3 ಸಾವಿರ ಮೀಟರ್‌ಗಿಂತ ಹೆಚ್ಚು ಎತ್ತರದಲ್ಲಿ ವಿಮಾನದ ಒಳಗೆ ವೈ-ಫೈ ಸೇವೆಯನ್ನು ಒದಗಿಸಬಹುದು. ಆದ್ರೆ ವಿಮಾನದಲ್ಲಿ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಲು ಅನುಮತಿ ಇದ್ದಾಗ ಮಾತ್ರ ಪ್ರಯಾಣಿಕರು ಈ ಸೇವೆಯನ್ನು ಬಳಸಲು ಸಾಧ್ಯವಾಗುತ್ತದೆ.
ಫಾಲ್ಕನ್ ರಾಕೆಟ್ ಬಗ್ಗೆ ನಿಮಗೆಷ್ಟು ಗೊತ್ತು?
ಉಪಗ್ರಹ ಉಡಾವಣೆಯ ಸಮಯದಲ್ಲಿ 70 ಮೀಟರ್ ಉದ್ದ ಮತ್ತು ಸುಮಾರು 549 ಟನ್ ತೂಕದ ಪ್ರಮಾಣಿತ ಫಾಲ್ಕನ್ 9 B-5 ರಾಕೆಟ್ ಅನ್ನು ಲಿಫ್ಟ್-ಆಫ್ಗಾಗಿ ಬಳಸಲಾಗುತ್ತದೆ. ಇದನ್ನು 2 ಹಂತದ ರಾಕೆಟ್‌ನಂತೆ ವಿನ್ಯಾಸಗೊಳಿಸಲಾಗಿದೆ. ರಾಕೆಟ್ ಜಿಯೋಸಿಂಕ್ರೋನಸ್ ವರ್ಗಾವಣೆ ಕಕ್ಷೆಗೆ 8,300 ಕೆಜಿ ಮತ್ತು ಕಡಿಮೆ ಭೂಮಿಯ ಕಕ್ಷೆಗೆ 22,800 ಕೆಜಿ ವರೆಗೆ ಎತ್ತುತ್ತದೆ. ಫಾಲ್ಕನ್ 9 ಮರುಬಳಕೆ ಮಾಡಬಹುದಾದ ರಾಕೆಟ್ ಆಗಿದೆ. ಈ ರಾಕೆಟ್ ತನ್ನ ಬೂಸ್ಟರ್‌ಗಾಗಿ 19 ನೇ ಹಾರಾಟವನ್ನು ಮಾಡುತ್ತದೆ ಎಂದು ಸ್ಪೇಸ್‌ಎಕ್ಸ್ ಹೇಳಿಕೊಂಡಿದೆ. ಹಂತ ಬೇರ್ಪಟ್ಟ ನಂತರ ಇದು ಡ್ರೋನ್ ಶಿಪ್ನಲ್ಲಿ ಇಳಿಯುತ್ತದೆ. ನಂತರ ಇದನ್ನು ಅಟ್ಲಾಂಟಿಕ್ ಸಾಗರದಲ್ಲಿ ನಿಯೋಜಿಸಲಾಗುವುದು.
ಕರ್ನಾಟಕದ ಹಾಸನದಲ್ಲಿ ನೆಲೆಗೊಂಡಿರುವ ಇಸ್ರೋದ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ ಪ್ರಕಾರ, ಒಮ್ಮೆ ಈ ಉಪಗ್ರಹ ಕಕ್ಷೆಯಲ್ಲಿ ಸ್ಥಾಪಿತವಾದ್ರೆ ನಾವು ಕಂಟ್ರೋಲ್ಗೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿದೆ. ಈ ರಾಕೆಟ್ ಉಪಗ್ರಹವನ್ನು ಭಾರತದಿಂದ 36,000 ಕಿಲೋಮೀಟರ್ ಎತ್ತರದಲ್ಲಿರುವ ತನ್ನ ಗಮ್ಯಸ್ಥಾನಕ್ಕೆ ಕೊಂಡೊಯ್ಯುತ್ತದೆ. ಇಲ್ಲಿಯವರೆಗೆ ಫಾಲ್ಕನ್ 9,395 ಉಡಾವಣೆ ಮಾಡಿದೆ. ಈ ಪೈಕಿ 4ರಲ್ಲಿ ಮಾತ್ರ ವಿಫಲವಾಗಿದೆ. ಉಳಿದ ಕಾರ್ಯಾಚರಣೆಗಳಲ್ಲಿ ಇದು ಶೇಕಡ 99 ರಷ್ಟು ಗಮನಾರ್ಹ ಯಶಸ್ಸಿನ ಪ್ರಮಾಣವನ್ನು ಸಾಧಿಸಿದೆ.
ಓದಿ: ಭಾರತ ಮತ್ತಷ್ಟು ಭದ್ರ: ಮೊದಲ 'ಲಾಂಗ್ ರೇಂಜ್ ಹೈಪರ್‌ಸಾನಿಕ್ ಕ್ಷಿಪಣಿ' ಪರೀಕ್ಷೆ ಯಶಸ್ವಿ; ಇತಿಹಾಸ ಸೃಷ್ಟಿಸಿದ DRDO