ಬೆಂಗಳೂರು: ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ಸಂಪುಟ ಸಚಿವರ ಜೊತೆ ಸಭೆ ನಡೆಸಿ, ರಾಜಕೀಯ ಬೆಳವಣಿಗೆ, ಬಿಜೆಪಿ ಹೋರಾಟದ ಅಸ್ತ್ರಕ್ಕೆ ಕೌಂಟರ್ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.
ವಕ್ಫ್ ವಿವಾದದ ಬಗ್ಗೆ ಚರ್ಚೆ: ಸಭೆಯಲ್ಲಿ ವಕ್ಫ್ ವಿಚಾರದಲ್ಲಿ ಬಿಜೆಪಿ ರಾಜ್ಯಾದ್ಯಂತ ಜನಜಾಗೃತಿ ಅಭಿಯಾನ ಹಿನ್ನೆಲೆ ಸರ್ಕಾರದಿಂದ ಕೌಂಟರ್ ಪ್ಲಾನ್ ರೂಪಿಸುವ ಬಗ್ಗೆ ಚರ್ಚೆ ನಡೆಸಲಾಯಿತು. ವಕ್ಫ್ ವಿಚಾರ ಮುಂದಿಟ್ಟುಕೊಂಡು ರೈತರು, ಜನರು, ಮಠಾಧೀಶರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವ ಸಾಧ್ಯತೆ ಇದೆ. ಹಿರಿಯ ಸಚಿವರು, ವಕ್ಫ್ ವಿಚಾರವಾಗಿ ಬಿಜೆಪಿ ಆರೋಪಕ್ಕೆ ಕೌಂಟರ್ ನೀಡಬೇಕು. ಈ ಸಂಬಂಧ ಸರ್ಕಾರದ ನಿರ್ದೇಶನ, ಕಾನೂನಿನ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡುವಂತೆ ಸಿಎಂ ಸೂಚನೆ ನೀಡಿದ್ದಾರೆ.
ಲೋಕಸಭಾ ಅಧಿವೇಶನ ಹಿನ್ನೆಲೆಯಲ್ಲಿ ಸಂಸದರಿಗೆ ರಾಜ್ಯದ ವಿಷಯಗಳ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ. ಶೇ.40 ಕಮಿಷನ್ ಆರೋಪಕ್ಕೆ ಲೋಕಾಯುಕ್ತ ಕ್ಲೀನ್ ಚಿಟ್ ವಿಚಾರ ಸಂಬಂಧ ಮುಂದೇನು ಮಾಡಬೇಕು ಎಂಬುದರ ಬಗ್ಗೆಯೂ ಚರ್ಚಿಸಲಾಗಿದೆ. ಇತ್ತ ನ್ಯಾ. ಮೈಕಲ್ ಡಿ ಕುನ್ಹಾ ವರದಿ ಆಧರಿಸಿ ತನಿಖೆಗೆ ಎಸ್ಐಟಿ ರಚನೆ ಸಂಬಂಧ ಸಮಾಲೋಚನೆ ನಡೆಸಲಾಗಿದೆ. ಎಸ್ಐಟಿ ನೇತೃತ್ವವನ್ನು ಯಾರು ವಹಿಸಬೇಕು ಮತ್ತು ತ್ವರಿತ ತನಿಖೆ ಕೈಗೆತ್ತಿಕೊಂಡು ಎಫ್ಐಆರ್ ದಾಖಲು ಸಂಬಂಧ ಮಹತ್ವದ ಚರ್ಚೆ ನಡೆಸಲಾಗಿದೆ.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಬೇಕಿರುವ ವಿಧೇಯಕಗಳು, ಮಹಾತ್ಮ ಗಾಂಧಿ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ, ಕಾರ್ಯಕ್ರಮ ರೂಪುರೇಷೆ ಬಗ್ಗೆಯೂ ಸಭೆಯಲ್ಲಿ ಗಂಭೀರ ಚೆರ್ಚೆ ನಡೆಸಲಾಗಿದೆ.
ಪಡಿತರ ವಿವಾದ ಬಗ್ಗೆ ಚರ್ಚೆ: ಇದೇ ವೇಳೆ ಬಿಪಿಎಲ್ ಕಾರ್ಡ್ ರದ್ದು ಎಂದು ಬಿಜೆಪಿ ನಾಯಕರ ಆರೋಪ ಹಿನ್ನೆಲೆ ಸಿಎಂ ನೇತೃತ್ವದ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದೆ. ಅರ್ಹರ ಬಿಪಿಎಲ್ ಕಾರ್ಡ್ ಯಾವುದೇ ಕಾರಣಕ್ಕೂ ರದ್ದು ಮಾಡಲ್ಲ. ತೆರಿಗೆ ಪಾವತಿದಾರರು, ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್ ಎಪಿಎಲ್ಗೆ ಬದಲಾವಣೆ ಮಾಡಲಾಗುತ್ತದೆ. ಬಿಪಿಎಲ್ ಕಾರ್ಡ್ ಸಮಗ್ರವಾಗಿ ಪರಿಷ್ಕರಣೆ ಮಾಡಿ ಎಂದು ಸಿಎಂ ಸೂಚನೆ ನೀಡಿದ್ದಾರೆ. ಇಲಾಖೆ ಸಭೆ ನಡೆಸಿ, ಕ್ರಮ ತೆಗೆದುಕೊಳ್ಳಲು ಸಿಎಂ ಸೂಚಿಸಿದ್ದಾರೆ. ಅರ್ಹರಲ್ಲದವರನ್ನ ಎಪಿಎಲ್ಗೆ ಸೇರಿಸಲು, ಪರಿಷ್ಕರಣೆ ವೇಳೆ ಕೈತಪ್ಪಿ ಹೋದ್ರೆ ಬಿಪಿಎಲ್ ಕಾರ್ಡ್ ಪಡೆಯಲು ಮತ್ತೊಮ್ಮೆ ಅವಕಾಶ ನೀಡುವಂತೆ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಇದನ್ನೂ ಓದಿ: ಅನರ್ಹ ರೇಷನ್ ಕಾರ್ಡ್ಗಳು ಮಾತ್ರ ರದ್ದು, ಅರ್ಹ ಬಡವರಿಗೆ ಕಾರ್ಡ್ ತಪ್ಪಿಸುವುದಿಲ್ಲ: ಸಿಎಂ ಭರವಸೆ