ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಸ್ಮರಣೆ ವ್ಯಸನವಾಗಿದೆ ಎಂದು ಹೇಳಿಕೆ ನೀಡಿರುವ ಕೇಂದ್ರ ಗೃಹಮಂತ್ರಿ ಅಮಿತ್ ಶಾ ವಿರುದ್ಧ ಮೈಸೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ, ಪಕ್ಷದ ಕಾನೂನು ವಿಭಾಗದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ನಗರದ ನ್ಯಾಯಾಲಯದ ಮುಂಭಾಗದ ಗಾಂಧೀಜಿ ಪುತ್ಥಳಿ ಬಳಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಬಿಜೆಪಿ ಕಚೇರಿಗೆ ನುಗ್ಗಲು ಕಚೇರಿ ರಸ್ತೆಯ ಮುಂಭಾಗ ಬಂದಾಗ, ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ, ತಳ್ಳಾಟ ನಡೆಯಿತು.
"ಡಾ.ಬಿ.ಆರ್.ಅಂಬೇಡ್ಕರ್ ಅವರ ಸ್ಮರಣೆ ವ್ಯಸನ ಎಂದಿರುವ ಅಮಿತ್ ಶಾ, ದೇಶ ಬಿಟ್ಟು ತೊಲಗಲಿ. ಇಂತಹ ಹೇಳಿಕೆ ನೀಡಿರುವ ಇವರನ್ನು ಪ್ರಧಾನಿ ಮೋದಿ ಅವರು ಸಚಿವ ಸ್ಥಾನದಿಂದ ವಜಾಗೊಳಿಸಿ ಹಾಗೂ ಗಡಿಪಾರು ಮಾಡಲಿ" ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಡಿಸಿಸಿ ಕಾನೂನು ಘಟಕದ ಅಧ್ಯಕ್ಷ ವಕೀಲ ಎ.ಆರ್.ಕಾಂತರಾಜ್ ಮಾತನಾಡಿ, "ಅಮಿತ್ ಶಾ, ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಬಿಜೆಪಿ ಸಂಸ್ಕೃತಿ ಅಂಬೇಡ್ಕರ್ ಅವರ ಸಂವಿಧಾನ ಒಪ್ಪಲ್ಲ. ಅವರದು ಕೊಳಕು ಮನಸ್ಥಿತಿ, ಗೃಹಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು" ಎಂದು ಕಿಡಿಕಾರಿದರು.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, "ಅಮಿತ್ ಶಾ ಮಾತನಾಡಿದ್ದನ್ನು ಕಾಂಗ್ರೆಸ್‌ನವರು ತಿರುಚಿದ್ದಾರೆ ಎಂದು ಹೇಳುತ್ತಾರೆ. ಅವರದೇ ಲೋಕಸಭಾ ಟಿವಿ ಚಾನಲ್ನಿಂದ ಕೊಟ್ಟ ತುಣುಕು ಅದು. ದೇಶದಾದ್ಯಂತ ಇವರ ವಿಡಿಯೋ ಅನ್ನು ಜನ ನೋಡಿದ್ದಾರೆ. ಅವರ ಹೇಳಿಕೆ ಹೇಗೆ ತಿರುಚಲು ಸಾಧ್ಯ? ಸಂವಿಧಾನ ಇಲ್ಲದಿದ್ದರೆ ಅಮಿತ್ ಶಾ ಗುಜಿರಿ ವ್ಯಾಪಾರ ಮಾಡಬೇಕಾಗಿತ್ತು. ಮೋದಿ ಈಗ ಸುಳ್ಳು ಹೇಳುತ್ತಿದ್ದಾರಲ್ಲ ಮೊದಲು ಟೀ ಮಾರುತ್ತಿದ್ದೆ ಎಂದು. ಸಂವಿಧಾನ ಇಲ್ಲದಿದ್ದರೆ ನಿಜವಾಗಲೂ ಟೀ ಮಾರಬೇಕಾಗಿತ್ತು" ಎಂದು ಲೇವಡಿ ಮಾಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಕ್ಕಯ್ಯ ಪದ್ಮಸಾಲಿ ಮಾತನಾಡಿ, "ಸಂವಿಧಾನದ ಬದಲು ದೇವರು ಎಂದು ಹೇಳಬೇಕು ಎಂದು ಗೃಹಮಂತ್ರಿ ಅಮಿತ್ ಶಾ ಹೇಳಿದ್ದಾರೆ. ದೇಶದ ಜನರಿಗೆ ಸಂವಿಧಾನವೇ ಮೇಲು. ಜನರನ್ನು ಕಾಯುತ್ತಿರುವುದು ದೇಶದ ಸಂವಿಧಾನ ಎಂಬುವುದನ್ನು ಅಮಿತ್ ಶಾ ಮರೆಯಬಾರದು. ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಅವಾಚ್ಯ ಪದಗಳನ್ನು ಬಳಸಿ ಮಾತನಾಡಿದ್ದಾರೆ. ಇವರ ಮಾತಿನಿಂದಲ್ಲೇ ಬಿಜೆಪಿಯವರ ಮನಸ್ಥಿತಿ ತಿಳಿಯುತ್ತದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಉಪಾಧ್ಯಕ್ಷೆ ಡಾ.ಪುಷ್ಪ ಅಮರ್‌ನಾಥ್, ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಮುಖಂಡರಾದ ಎಚ್.ವಿ.ರಾಜೀವ್, ಆರ್.ಮೂರ್ತಿ, ಕೆ.ಎಸ್.ಶಿವರಾಮು, ಡೈರಿ ವೆಂಕಟೇಶ್, ಈಶ್ವರ್ ಚಕ್ಕಡಿ, ಶ್ರೀನಿವಾಸ್, ಮೈಸೂರು ಬಸವಣ್ಣ ಬಾಬು, ಪುಷ್ಪಲತಾ ಚಿಕ್ಕಣ್ಣ, ಕೆ.ಮಹೇಶ್, ಹರೀಶ್, ರಾಹುಲ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಇದನ್ನೂ ಓದಿ: 'ರಕ್ತ ಸುರಿಯುತ್ತಿದ್ರೂ ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ, ಕುಡಿಯಲು ನೀರು, ಒಂದು ತುತ್ತು ಊಟ ನೀಡಿಲ್ಲ'