ಹುಬ್ಬಳ್ಳಿ : ನಮಗೆ ನಿಗಮ ಬೇಡ ಮೀಸಲಾತಿ ಬೇಕು. ವೀರಶೈವ ಲಿಂಗಾಯತ ನಿಗಮ ಮಾಡುವುದರಿಂದ ಏನೂ ಉಪಯೋಗವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಅಸಮಾಧಾನ ಹೊರಹಾಕಿದ್ದಾರೆ.
ನಗರದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಣ್ಣ ಸಣ್ಣ ಸಮುದಾಯದಗಳಿಗೆ ಇದು ಉಪಯೋಗವಾಗುತ್ತದೆ. ಈಗ ವೀರಶೈವ ಲಿಂಗಾಯತ ನಿಗಮ ಮಾಡಿ, ಅದಕ್ಕೆ ನೈಯಾ ಪೈಸೆ ಹಣ ನಿಗದಿ ಮಾಡಿಲ್ಲ. ಕರ್ನಾಟಕದಲ್ಲಿ 1 ಕೋಟಿ 18 ಲಕ್ಷ ಲಿಂಗಾಯತರಿದ್ದಾರೆ. ಈ ನಿಗಮಗಳಿಗೆ ಅಧ್ಯಕ್ಷರನ್ನ ಮಾಡಿ, ಗೂಟದ ಕಾರು ನೀಡ್ತಾರೆ, ಇದರಿಂದ ಏನೂ ಪ್ರಯೋಜನವಿಲ್ಲ. ನನ್ನ ಪತ್ರದಿಂದ ಈಗ ನಿಗಮ ಮಾಡಿದ್ದಾರೆ, ಇದರಿಂದ ನಮ್ಮ ಬೇಡಿಕೆಗಳು ಪೂರೈಕೆ ಆಗಿಲ್ಲ. ಓಬಿಸಿಯಲ್ಲಿ ಲಿಂಗಾಯತವನ್ನ ಸೇರಿಸಬೇಕೆಂದು ನಮ್ಮ ಮನವಿ, ಈಗಾಗಲೇ ಕೇಂದ್ರ ಸರ್ಕಾರದ ಮುಂದೆ ಇದೆ. ಸರ್ಕಾರ ಈಗ ಲಿಂಗಾಯತ ನಿಗಮ ಮಾಡಿ ಜೇನು ಗುಡಿಗೆ ಕೈ ಹಾಕಿದೆ ಎಂದರು.
ಸರ್ಕಾರ ತಜ್ಞರ ಸಮಿತಿ ಮಾಡಿ ಸಾಧಕ ಬಾದಕಗಳನ್ನ ನೋಡಿ ಒಂದು ನಿರ್ಧಾರಕ್ಕೆ ಬರಬೇಕು. ಈ ನಿಗಮಕ್ಕೆ ಬಾಲವು ಇಲ್ಲ ತಲೆಯೂ ಇಲ್ಲ. ಒಂದು ಸಾವಿರ ಕೋಟಿ ರೂ ನಿಗಮದಲ್ಲಿಟ್ಟರೆ ಶೇ 25ರಷ್ಟು ಜನರಿಗೆ ಅನಕೂಲವಾಗುತ್ತದೆ. ನಮಗೆ ಶೇ 16 ರಷ್ಟು ಮೀಸಲಾತಿ ಸಿಕ್ಕರೆ ಎಲ್ಲ ಸೌಲಭ್ಯಗಳು ಸಿಗುತ್ತವೆ. ನಮ್ಮ ಪ್ರಮುಖ ಹೋರಾಟ ಶೇ 16 ರಿಂದ 18 ರವರೆಗೆ ಮೀಸಲಾತಿ ಸಿಗಬೇಕು. ಓಬಿಸಿಯಲ್ಲಿ ಲಿಂಗಾಯತರನ್ನು ಸೇರಿಸಬೇಕು. ಅಲ್ಲಿಯವರೆಗೂ ನಾವು ನಿಗಮವನ್ನ ಸ್ವಾಗತ ಮಾಡುವುದಿಲ್ಲ, ವಿರೋಧವನ್ನು ಸಹ ಮಾಡುವುದಿಲ್ಲ ಎಂದರು.
ಮರಾಠ ನಿಗಮವನ್ನ ನಾವು ಸ್ವಾಗತ ಮಾಡುತ್ತೇವೆ. ಈ ನಿಗಮ ಕರ್ನಾಟಕದಲ್ಲಿ ಹುಟ್ಟಿ ಬೆಳೆದದರಿಗೆ ಲಾಭ ಆಗಬೇಕು, ಅದನ್ನ ಬಿಟ್ಟು ಎಂಇಎಸ್ ಅಂತವರಿಗೆ ಇದು ಉಪಯೋಗ ಆಗಬಾರದು. ಇದಕ್ಕೆ ಸರ್ಕಾರ ಒಂದು ಒಳ್ಳೆಯ ರೂಲ್ಸ್ ಮಾಡಲಿ ಎಂದು ಇದೇ ವೇಳೆ ಒತ್ತಾಯಿಸಿದರು.