ಕಲಘಟಗಿ: ತಾಲೂಕಿನ ಮಲಕನಕೊಪ್ಪ ಗ್ರಾಮದ ಬಸವ್ವ ತೆಗ್ಗಿನಮನಿ ಎಂಬ ರೈತ ಮಹಿಳೆಯು ತಮ್ಮ ಹೊಲದಲ್ಲಿ ಬೆಳೆದ ಗೋವಿನ ಜೋಳದ ತೆನೆಯನ್ನು ಜಮೀನಿನಲ್ಲಿ ರಾಶಿ ಹಾಕಿ ಕೂಡಿಟ್ಟಿದ್ದು, ಇದನ್ನು ಗಮನಿಸಿದ ಕಿಡಿಗೇಡಿಗಳು ರಾತ್ರಿ ಸಮಯದಲ್ಲಿ ಈ ರಾಶಿಗೆ ಬೆಂಕಿ ಇಟ್ಟು, ಸಂಪೂರ್ಣ ಜೋಳದ ರಾಶಿಯನ್ನೇ ಸುಟ್ಟು ಹಾಕಿದ್ದಾರೆ.
ಸುಮಾರು ಎರಡು ಎಕರೆ ವ್ಯಾಪ್ತಿಯಲ್ಲಿ ಗೋವಿನ ಜೋಳ ಬೆಳೆಯಲಾಗಿದ್ದು, ಫಸಲಿಗೆ ಬಂದ ನಂತರ ಕಟಾವು ಮಾಡಿ ರಾಶಿ ಹಾಕಲಾಗಿತ್ತು. ಬುಧವಾರ ರಾತ್ರಿ ಜಮೀನಿನ ಬಳಿ ಯಾರು ಇಲ್ಲದ ವೇಳೆ ದುಷ್ಕರ್ಮಿಗಳು ಜೋಳದ ರಾಶಿಗೆ ಬೆಂಕಿ ಇಟ್ಟು ಪರಾರಿಯಾಗಿದ್ದಾರೆ ಎಂದು ಜಮೀನಿನ ಮಾಲೀಕರು ಆರೋಪಿಸಿದ್ದಾರೆ. ಅಂದಾಜು 2 ಲಕ್ಷ ರೂಪಾಯಿಯಷ್ಟು ಬೆಳೆ ಹಾನಿಯಾಗಿದೆ.
ಸ್ಥಳಕ್ಕೆ ಅಗ್ನಿಶಾಮಕದಳದ ಅಧಿಕಾರಿಗಳು, ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಆಗಮಿಸಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.