ಹುಬ್ಬಳ್ಳಿ : ನೂತನ ಸಚಿವರಾದ ಮೇಲೆ ಸಿದ್ದಾರೂಢರ ಪುಣ್ಯ ಭೂಮಿ, ರೈತ ನೆಲಕ್ಕೆ ನಾನು ಬಂದಿದ್ದೇನೆ. ಪಕ್ಷ ಬಹು ದೊಡ್ಡ ಜವಾಬ್ದಾರಿಯಿಂದ ನನಗೆ ಸ್ಥಾನ ಕೊಟ್ಟಿದೆ ಎಂದು ನೂತನ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕೆಳಮಟ್ಟದಿಂದ ನಾನು ಹೋರಾಟದ ಮೂಲಕ ಬಂದಿದ್ದೇನೆ. ಹತ್ತು ಹಲವು ಕಾನೂನಾತ್ಮಕ ವಿಚಾರಗಳನ್ನ ಬಗೆಹರಿಸುವ ಕಾರ್ಯಕ್ಕೆ ಮುಂದಾಗಬೇಕಿದೆ. ಪ್ರತಿಯೊಂದು ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಿದೆ. ಈಗಾಗಲೇ ಕಳಸಾ ಬಂಡೂರಿ ಹೋರಾಟದಲ್ಲಿ ಎಲ್ಲರೂ ಪಾಲ್ಗೊಂಡಿದ್ದೇವೆ. ಹಿರಿಯ ನಾಯಕರಿಂದ ಹಿಡಿದು ನಾವೆಲ್ಲ ಭಾಗಿಯಾಗಿದ್ದಕ್ಕೆ ಈ ಸ್ಥಾನದಲ್ಲಿದ್ದೇವೆ ಎಂದರು.
ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಟ್ರಿಬ್ಯುನಲ್ ನಲ್ಲಿ 4 ಟಿಎಂಸಿ ಕುಡಿಯುವ ನೀರು ಕೊಡುವಂತೆ ಆದೇಶ ಆಗಿದೆ. ಸಣ್ಣ ಪುಟ್ಟ ತೊಡಕುಗಳನ್ನ ಬಗೆಹರಿಸಿ ಯೋಜನೆಯನ್ನ ಜಾರಿ ಮಾಡುತ್ತೇವೆ. ಗೊಂದಲಗಳು ಆಗಬಾರದು 330 ಹಳ್ಳಿಗಳಿಗೂ ನೀರು ಕೊಡುವ ಯೋಜನೆ ಮಾಡುತ್ತಿದ್ದೇವೆ. ಕಳಸಾ ಬಂಡೂರಿ ವಿಚಾರದಲ್ಲಿ ಗೊಂದಲದ ಹೇಳಿಕೆ ನೀಡುವುದು ಬೇಡ. ಮೂರು ರಾಜ್ಯಗಳ ಸಹಕಾರ ಈ ವಿಚಾರದಲ್ಲಿ ಬೇಕಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ : ಸಕ್ರಿಯ ರಾಜಕಾರಣದಲ್ಲಿ ಕೊನೆವರೆಗೂ ಇರುತ್ತೇನೆ: ಸಂಸದ ವಿ.ಶ್ರೀನಿವಾಸ್ ಪ್ರಸಾದ್
ತುಪ್ಪರಿ ಹಳ್ಳ ಮತ್ತು ಬೆಣ್ಣೆ ಹಳ್ಳದ ಡ್ರೋನ್ ಸರ್ವೇ ಆಗಿದೆ. ಮುಂದಿನ 60 ದಿನಗಳಲ್ಲಿ ಜನರಿಗೆ ಸಿಹಿ ಸುದ್ದಿ ನೀಡುತ್ತೇನೆ. ಯಾವ ಖಾತೆ ಕೊಟ್ಟರೂ ನಾನು ನಿಭಾಯಿಸುತ್ತೇನೆ ಎಂದರು.