ಹುಬ್ಬಳ್ಳಿ: ರಾಜ್ಯದಲ್ಲಿ ಲಾಕ್‌ಡೌನ್ ಕುರಿತು ಜನವರಿ 7ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ, ತಜ್ಞರ ವರದಿ ಆಧರಿಸಿ ಮುಖ್ಯಮಂತ್ರಿಗಳು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸಚಿವ ಶಂಕರ ಪಾಟೀಲ ಮುನ್ನೇನಕೊಪ್ಪ ತಿಳಿಸಿದರು.
ತಾಲೂಕಿನ ಹೆಬಸೂರು ಗ್ರಾಮದಲ್ಲಿ 15 ರಿಂದ 18 ವಯೋಮಾನದ ಮಕ್ಕಳಿಗೆ ಕೋವಿಡ್ ವ್ಯಾಕ್ಸಿನ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್ ಪಾಸಿಟಿವಿಟಿ ರೇಟ್‌ಗೆ ಅನುಗುಣವಾಗಿ ಲಾಕ್ ಡೌನ್ ತೀರ್ಮಾನ ಕೈಗೊಳ್ಳಲಾಗುತ್ತದೆ. ಲಾಕ್‌ಡೌನ್ ವಿಚಾರದಲ್ಲಿ ನನ್ನ ಮತ್ತು ಕೆಲ ಸಚಿವರು, ಶಾಸಕರ ಅಭಿಪ್ರಾಯ ಮುಖ್ಯವಲ್ಲ. ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮೊದಲಾದ ಕಡೆ ಕೊರೊನಾ ಉಲ್ಬಣ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತಜ್ಞರ ವರದಿ ಆಧರಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಕೋವಿಡ್ ಬಗ್ಗೆ ಮುನ್ನೆಚ್ಚರಿಕೆ ಕೈಗೊಂಡರೆ ಲಾಕ್‌ಡೌನ್ ಅಗತ್ಯವಿಲ್ಲ: ಹೊರಟ್ಟಿ
ಇದೇ ವಿಚಾರವಾಗಿ ನಗರದಲ್ಲಿ ಮಾತನಾಡಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೋವಿಡ್ ಬಗ್ಗೆ ಮುನ್ನೆಚ್ಚರಿಕೆ ಕೈಗೊಂಡರೆ ಲಾಕ್‌ಡೌನ್ ಅಗತ್ಯವಿಲ್ಲ. ಲಾಕ್‌ಡೌನ್ ಒಂದೇ ಮದ್ದಲ್ಲ. ಅನಿವಾರ್ಯವಾದಲ್ಲಿ ಲಾಕ್‌ಡೌನ್ ಮಾಡಲೇಬೇಕಾಗುತ್ತೆ ಎಂದು ಹೇಳಿದರು.
ಈಗಾಗಲೇ ಲಾಕ್‌ಡೌನ್‌ನಿಂದ ಸಾಕಷ್ಟು ತೊಂದರೆ ಅನುಭವಿಸಿದ್ದೇವೆ. ಮತ್ತೆ ಲಾಕ್‌ಡೌನ್ ಜಾರಿಯಾದ್ರೆ ಮತ್ತಷ್ಟು ತೊಂದರೆಯಾಗಲಿದೆ. ಬಹಳಷ್ಟು ಜನ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿಲ್ಲ. ಶಾಲಾ ಮಕ್ಕಳಲ್ಲಿಯೂ ಕೋವಿಡ್ ಹೆಚ್ಚಳವಾಗುತ್ತಿದೆ. ಅನಿವಾರ್ಯವಾದಾಗ ಸರ್ಕಾರ ಒಂದು ತೀರ್ಮಾನ ತೆಗೆದುಕೊಳ್ಳುತ್ತದೆ. ನಮ್ಮ ಸರ್ಕಾರ ಸಾಕಷ್ಟು ಕಾಳಜಿ ವಹಿಸಿದೆ. ಎಲ್ಲಿಯೂ ಜವಾಬ್ದಾರಿಯಿಂದ ನುಣುಚಿಕೊಂಡಿಲ್ಲ. ಇದಕ್ಕೆ ಜನ ಹೆಚ್ಚು ಸಹಕಾರ ಕೊಡಬೇಕು ಎಂದರು.