ಹುಬ್ಬಳ್ಳಿ: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೆಸರು, ಉದ್ದು ಖರೀದಿ ಕೇಂದ್ರ ಆರಂಭಿಸುವಂತೆ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ 10 ಜಿಲ್ಲೆಗಳ ವ್ಯಾಪ್ತಿಯಲ್ಲಿ 4.40 ಲಕ್ಷ ಹೆಕ್ಟೇರ್ ಹೆಸರು ಬೆಳೆದಿದ್ದಾರೆ. ಹೆಸರು ಬೆಂಬಲ ಬೆಲೆ 7196 ರೂ. ಇದೆ. ಮಾರುಕಟ್ಟೆ ಬೆಲೆ 4000 ರೂ. ಇದೆ. ಆದ್ದರಿದ ಈ ಕೂಡಲೇ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆ ಮೂಲಕ ಖರೀದಿಸಬೇಕು ಎಂದರು.
ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆಯಿಂದ ರೈತರಿಗೆ ಮೋಸ ಆಗುತ್ತಿದೆ. ಸರ್ಕಾರ ಉಳುವವನ ಪರ ಇಲ್ಲ. ಉಳ್ಳವರ ಪರ ಇದೆ. ವಿಧಾನಸೌಧ ಭೂ ಮಾಫಿಯಾ ಕೇಂದ್ರವಾಗಿದೆ ಎಂದು ಆರೋಪಿಸಿದರು.
ಈ ಕೂಡಲೇ ಎಪಿಎಂಸಿ ಕಾಯ್ದೆ ತಿದ್ದುಪಡಿ ಕೈ ಬಿಡಬೇಕು ಎಂದು ಅವರು ಒತ್ತಾಯಿಸಿದರು. ಇಲ್ಲವಾದರೆ ವಿಧಾನಸೌಧ ಚಲೋ ಕರೆ ನೀಡಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.