ಹುಬ್ಬಳ್ಳಿ: ಕಟ್ಟಡ ನಿರ್ಮಾಣ ಕೆಲಸದ ವೇಳೆ, ಸಿಮೆಂಟ್ ಮಿಕ್ಸ್ ಮಾಡುವ ಯಂತ್ರದಲ್ಲಿ ಯುವಕನ ಕೈ ಸಿಲುಕಿದ ಪರಿಣಾಮ ಮೂರು ಬೆರಳುಗಳು ತುಂಡಾಗಿದ್ದು, ಬೆರಳುಗಳನ್ನು ಜೋಡಿಸಿ ಕೊಡುವಂತೆ ಡಬ್ಬಿಯಲ್ಲಿ ಹಾಕಿಕೊಂಡು ಬಂದ ಘಟನೆ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ನಡೆದಿದೆ.
ಓದಿ: ಅಂತರ್ಜಾತಿ ವಿವಾಹವಾದ ಪ್ರೇಮಿಗಳು: ಪೋಷಕರು, ಪೊಲೀಸರಿಂದ ಬೆದರಿಕೆ ಆರೋಪ
ಲಕ್ಷ್ಮೇಶ್ವರ ಮೂಲದ ನಾಗಪ್ಪ ಎಂಬುವರು ಹಾಲಗಿ ಮರೋಳ ಗ್ರಾಮಕ್ಕೆ ಕೆಲಸಕ್ಕೆಂದು ತೆರಳಿದ್ದರು. ಆಗ ಸಿಮೆಂಟ್ ಕಲಸುವ ಯಂತ್ರದಲ್ಲಿ ಕೈ ಸಿಲುಕಿ ಮೂರು ಬೆರಳುಗಳು ಕಟ್ ಆಗಿವೆ. ಕೂಡಲೇ ಸ್ಥಳಿಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಬೆರಳುಗಳನ್ನು ಡಬ್ಬಿ ಸಮೇತ ತೆಗೆದುಕೊಂಡು ಬಂದಿದ್ದಾರೆ.
ಆದರೆ ಕಿಮ್ಸ್ ನಲ್ಲಿ ವೈದ್ಯರು ಈ ಬೆರಳುಗಳನ್ನು ಜೋಡಿಸಲು ಸಾಧ್ಯವಿಲ್ಲ ಎಂದು ಬೆರಳುಗಳು ಕಟ್ ಆದ ಜಾಗಕ್ಕೆ ಚಿಕಿತ್ಸೆಯನ್ನು ನೀಡಿದ್ದಾರೆ. ಸದ್ಯ ನಾಗಪ್ಪ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಿದ್ದಾರೆ.