ಧಾರವಾಡ: ಖರೀದಿ ಪತ್ರ ನೋಂದಾಯಿಸಿ ಕೊಡದ ಜಮೀನಿನ ಮಾಲೀಕರಿಗೆ ಜಿಲ್ಲಾ ಗ್ರಾಹಕರ ಆಯೋಗದಿಂದ ದಂಡ ಮತ್ತು ಪರಿಹಾರ ನೀಡುವಂತೆ ಆದೇಶಿಸಿದೆ. ಧಾರವಾಡದ ಶಿವಗಿರಿ ಬಡಾವಣೆಯ ನಿವಾಸಿ ಹನುಮಂತರಾವ ಕುಲಕರ್ಣಿ ಎಂಬುವವರ ಪವನ್ ಫಾರ್ಮ ಲ್ಯಾಂಡ್ ಡೆವಲಪರ್ಸ್ ಮತ್ತು ಜಮೀನಿನ ಮಾಲೀಕ ದ್ಯಾಮವ್ವ ಕೆಲಗೇರಿ ಹಾಗೂ ಅವರ ಕುಟುಂಬದವರೊಂದಿಗೆ ಕೆಲಗೇರಿಯಲ್ಲಿ 5ಗುಂಟೆ 1 ಆಣೆ ಜಮೀನನ್ನು 15ರೂ. ಲಕ್ಷಗಳಿಗೆ ಖರೀದಿಸಲು ದಿ:28/01/2022ರಂದು ಖರೀದಿ ಕರಾರು ಒಪ್ಪಂದ ಮಾಡಿ ಕೊಂಡಿದ್ದರು.
ಆ ಪ್ರಕಾರ ದೂರುದಾರ 10 ಲಕ್ಷ ರೂಪಾಯಿಗಳನ್ನು ಮುಂಗಡ ಹಣ ಎಂದು ಪಾವತಿಸಿದ್ದರು. ಆದರೆ ಡೆವಲಪರ್ಸ್ ಮತ್ತು ಜಮೀನಿನ ಮಾಲೀಕರು ಖರೀದಿ ಕರಾರಿನ ಷರತ್ತಿನಂತೆ 5 ಗುಂಟೆ 1 ಆಣೆ ಜಮೀನನ್ನು ಬಾಕಿ 5 ಲಕ್ಷ ರೂಪಾಯಿ ಪಡೆದುಕೊಂಡು 60 ದಿವಸಗಳ ಒಳಗಾಗಿ ಖರೀದಿ ಪತ್ರ ನೋಂದಣಿ ಮಾಡಿಕೊಟ್ಟಿರಲಿಲ್ಲ. ಒಂದಿಲ್ಲೊಂದು ನೆಪ ಹೇಳಿ ಖರೀದಿ ಪತ್ರ ಬರೆದುಕೊಡದೇ ತನಗೆ ಸತಾಯಿಸಿ ತೊಂದರೆ ಕೊಟ್ಟು ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿದ್ದಾರೆ ಅಂತಾ ಹೇಳಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ದೂರಿನ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ. ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ ಅ.ಬೋಳಶೆಟ್ಟಿ, ಪ್ರಭು. ಸಿ ಹಿರೇಮಠ ಅವರು ಮುಂಗಡವಾಗಿ ಹೇರಳ ಮೊತ್ತದ ಹಣವನ್ನು ಡೆವಲಪರ್ ಹಾಗೂ ಜಮೀನಿನ ಮಾಲಿಕರು ಪಡೆದು ತಮ್ಮ ವೈಯಕ್ತಿಕ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡು ದೂರುದಾರನಿಗೆ ಪಕ್ಕಾ ಖರೀದಿ ಪತ್ರ ನೋಂದಣಿ ಮಾಡಿಕೊಡದೇ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ಅಭಿಪ್ರಾಯಪಟ್ಟ ಆಯೋಗ ಈ ತೀರ್ಪು ನೀಡಿದೆ.
ಜಮೀನಿನ ಮಾಲೀಕರು ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ದೂರುದಾರನಿಗೆ ಜಮೀನಿನ ಖರೀದಿ ಪತ್ರ ನೋಂದಣಿ ಮಾಡಿ ಕೊಡುವಂತೆ ಆದೇಶಿಸಿದೆ. ಅದಕ್ಕೆ ವಿಫಲರಾದಲ್ಲಿ ದೂರುದಾರರಿಂದ ಮುಂಗಡವಾಗಿ ಪಡೆದ ಸೇರಿ 10 ಲಕ್ಷ ರೂಪಾಯಿ ಮೇಲೆ ಶೇ.9ರಷ್ಟು ಬಡ್ಡಿ ಲೆಕ್ಕ ಹಾಕಿ ಸಂದಾಯ ಮಾಡುವಂತೆ ಹಾಗೂ ಮಾನಸಿಕ ತೊಂದರೆಗೆ ರೂ.50,000 ಸಾವಿರ ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ ರೂ.10,000 ಗಳನ್ನು ಕೊಡುವಂತೆ ಪವನ್ ಫಾರ್ಮ ಲ್ಯಾಂಡ್ ಡೆವಲಪರ್ಸ್ ಮತ್ತು ಜಮೀನಿನ ಮಾಲಿಕರಿಗೆ ಆಯೋಗ ತನ್ನ ತೀರ್ಪಿನಲ್ಲಿ ಆದೇಶಿಸಿದೆ.
ಈ ಹಿಂದೆ ಹೆಚ್ಡಿಎಫ್ಸಿ ಬ್ಯಾಂಕಿಗೆ ಭಾರಿ ದಂಡ ವಿಧಿಸಿದ್ದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ: ಎಟಿಎಮ್ ದೋಷದಿಂದ ಎಟಿಎಮ್ನಲ್ಲೇ ಉಳಿದ ಹಣವನ್ನು ಗ್ರಾಹಕನಿಗೆ ನೀಡಲು ನಿರಾಕರಿಸಿದ ಹೆಚ್ಡಿಎಫ್ಸಿ ಬ್ಯಾಂಕಿಗೆ ಭಾರಿ ದಂಡ ವಿಧಿಸಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿತ್ತು. ಹುಬ್ಬಳ್ಳಿಯ ಅಂಚಟಗೇರಿ ನಿವಾಸಿ ಮಹ್ಮದರಫಕತ್ ಅನಸಾರಿ ಎಂಬುವವರು ಬಿಹಾರ ರಾಜ್ಯದ ಮುಝಫರಪುರ್ಗೆ ಪ್ರವಾಸಕ್ಕೆ ತೆರಳಿದಾಗ ಅಲ್ಲಿನ ಹೆಚ್ಡಿಎಫ್ಸಿ ಬ್ಯಾಂಕಿನ ಎಟಿಎಮ್ ನಲ್ಲಿರೂ. 10 ಸಾವಿರದಂತೆ ಎರಡು ಬಾರಿ ಹಣ ತೆಗೆಯಲು ತನ್ನ ಎಟಿಎಮ್ ಕಾರ್ಡ್ ಬಳಸಿದ್ದರು.
ಆದರೆ ಎಟಿಎಮ್ ನಿಂದ ಹಣ ಬರದೇ ಇದ್ದರೂ ಅವರ ಉಳಿತಾಯ ಖಾತೆಯಿಂದ ರೂ.20,000 ಡೆಬಿಟ್ ಆಗಿತ್ತು. ಈ ಬಗ್ಗೆ ದೂರುದಾರ ತನ್ನ ಉಳಿತಾಯ ಖಾತೆ ಇರುವ ಹುಬ್ಬಳ್ಳಿಯ ಅಂಚಟಗೇರಿಯ ಯುನಿಯನ್ ಬ್ಯಾಂಕ್‍ಗೆ ದೂರು ನೀಡಿ ಎಟಿಎಮ್ ತಪ್ಪನ್ನು ಸರಿಪಡಿಸಲು ಕೋರಿದ್ದರು. ಹೆಚ್ಡಿಎಫ್ಸಿ ಬ್ಯಾಂಕಿನವರು ಘಟನೆ ನಡೆದ ದಿನದಿಂದ ಸುಮಾರು 4 ವರ್ಷ ದೂರುದಾರನ ಖಾತೆಗೆ ಹಣ ಜಮಾ ಮಾಡಿರಲಿಲ್ಲ. ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಹೆಚ್. ಒಟ್ಟು 2,24,100 ರೂ ಗಳನ್ನು ಶೇ8% ರಂತೆ ಬಡ್ಡಿ ಹಾಕಿ ನೀಡುವಂತೆ ಹೆಚ್ಡಿಎಫ್ಸಿ ಬ್ಯಾಂಕಿಗೆ ಆಯೋಗ ಆದೇಶಿತ್ತು.
ಇದನ್ನೂ ಓದಿ:ವಿದ್ಯುತ್ ಪ್ರಸರಣ ಘಟಕಗಳ ಸುತ್ತಲು ನೈರ್ಮಲ್ಯ ಕಾಪಾಡಿ: ಬೆಸ್ಕಾಂ, ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ