ಹುಬ್ಬಳ್ಳಿ: ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಎತ್ತುಗಳಿಂದ ಕರಿ ಹರಿಸಿ ರೈತರು ಸಂಭ್ರಮಪಟ್ಟರು.
ಕೃಷಿಯಲ್ಲಿ ಯಂತ್ರಗಳ ಬಳಕೆ ಹೆಚ್ಚುತ್ತಿದ್ದಂತೆಯೇ ಜಾನುವಾರುಗಳ ಸಂಖ್ಯೆ ಕಡಿಮೆಯಾದ ಕಾರಣ ಕಾರಹುಣ್ಣಿಮೆ ತನ್ನ ಎಂದಿನ ಸಂಭ್ರಮ ಕಳೆದುಕೊಂಡಿದೆ. ಇದರ ನಡುವೆಯೂ ರೈತರ ಹಬ್ಬವೆಂದೇ ಖ್ಯಾತಿ ಪಡೆದಿರುವ ಕಾರಹುಣ್ಣಿಮೆಯನ್ನು ಇಲ್ಲಿನ ಜಂಗಲಿಪೇಟೆ ರೈತರು ಸಂಭ್ರಮದಿಂದ ಆಚರಿಸಿದರು.
ಜಂಗಲಿಪೇಟೆ ರೈತರು ಎಲ್ಲರೂ ಒಂದೆಡೆ ಸೇರಿ ಎತ್ತುಗಳನ್ನು ಓಡಿಸಿದರು. ಎತ್ತುಗಳಿಗೆ ಕಟ್ಟಲಾಗಿದ್ದ ಬೇವಿನ ಎಲೆಯ ಸರದಲ್ಲಿನ ಕೊಬ್ಬರಿ ಬೆಲ್ಲವನ್ನು ಹಗ್ಗದ ಮೂಲಕ ಹರಿಯುವ ಸ್ಪರ್ಧೆ ನಡೆಸಲಾಯಿತು. ಕರಿ ಎತ್ತು ಕರಿ ಹರಿದ್ರೆ ಹಿಂಗಾರು, ಬಿಳಿ ಎತ್ತು ಕರಿ ಹರಿದರೆ ಮುಂಗಾರು ಹಾಗೂ ಕಂದು ಬಣ್ಣದ ಎತ್ತಿನ ಕರಿ ಹರಿದ್ರೆ ಎರಡೂ ಋುತುಗಳಲ್ಲಿ ಮಳೆ ಉತ್ತಮವಾಗುವುದೆಂಬ ನಂಬಿಕೆ ಇದೆ.
ಇನ್ನು ಕಾರಹುಣ್ಣಿಮೆ ಹಬ್ಬದ ಹಿನ್ನೆಲೆಯಲ್ಲಿ ರೈತರು ಎತ್ತುಗಳು, ಜಾನುವಾರುಗಳನ್ನು ಸ್ವಚ್ಛವಾಗಿ ತೊಳೆದು ಮೈಗೆ ಹಾಗೂ ಕೊಂಬುಗಳಿಗೆ ತರಹೇವಾರಿ ಬಣ್ಣಗಳನ್ನು ಹಚ್ಚಿ ಶೃಂಗಾರ ಮಾಡಿ ಸಂತಸಪಟ್ಟರು.