ಧಾರವಾಡ: ಕುಮಾರೇಶ್ವರ ನಗರದ ಕಟ್ಟಡ ದುರಂತ ಪ್ರಕರಣದಲ್ಲಿ ಕೊನೆಗೂ ವಿಚಾರಣೆ ಆರಂಭಗೊಂಡಿದೆ.
ಕುಮಾರೇಶ್ವರ ನಗರದಲ್ಲಿನ ನಿರ್ಮಾಣ ಹಂತದಲ್ಲಿದ್ದ ವಾಣಿಜ್ಯ ಕಟ್ಟಡವು ಕಳೆದ ಮಾರ್ಚ್ 19 ರಂದು ಕುಸಿದಿತ್ತು. ಈ ಪ್ರಕರಣದ ಕುರಿತು ದಂಡಾಧಿಕಾರಿ ವಿಚಾರಣೆ ನಡೆಸಲು ಧಾರವಾಡ ಜಿಲ್ಲಾಧಿಕಾರಿಗಳನ್ನು ವಿಚಾರಣಾಧಿಕಾರಿಗಳನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವ ಹಿನ್ನೆಲೆ, ಡಿಸಿ ದೀಪಾ ಚೋಳನ ಅವರು ವಿಚಾರಣೆ ನಡೆಸಿದರು.
ಇನ್ನೂ ಈ ಘಟನೆಯಲ್ಲಿ ಮೃತಪಟ್ಟವರ ಕುಟುಂಬಸ್ಥರು, ಗಾಯಾಳುಗಳು ಹಾಗೂ ಸಂಬಂಧಿಸಿದ ಇತತರು ಕೂಡ ದಂಡಾಧಿಕಾರಿ ವಿಚಾರಣಾಧಿಕಾರಿಗಳ ಮುಂದೆ ತಮ್ಮ ಹೇಳಿಕೆ ನೀಡಿದರು. ಜೊತೆಗೆ ಸಂಬಂಧಿಸಿದ ಮಾಹಿತಿ, ದಾಖಲೆಗಳನ್ನು ಜಿಲ್ಲಾಧಿಕಾರಿಗಳ ಮುಂದೆ ನೀಡಿದರು.
19 ಜನ ಮೃತಪಟ್ಟವರ ಸಂಬಂಧಿಕರು ಹಾಗೂ 15 ಜನ ಗಂಭೀರ ಗಾಯಗೊಂಡವರನ್ನು ವಿಚಾರಣೆ ಮಾಡಲಾಯಿತು. ವಿಚಾರಣೆ ವೇಳೆ ಚಿಕಿತ್ಸೆಗೆ ಪರಿಹಾರ ಬೇಕು ಎಂದು ಗಾಯಾಳುಗಳು ಕೇಳಿಕೊಂಡಿದ್ದಾರೆ. ಅವರಿಗೆ ನಗರದ ಎಸ್ಡಿಎಂ ಮತ್ತು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಇನ್ನೂ ಬರುವ ಬುಧವಾರದೊಳಗೆ ಮೃತರ ಸಂಬಂಧಿಕರಿಗೆ ಹಾಗೂ ಗಾಯಾಳುಗಳಿಗೆ ಪರಿಹಾರ ವಿತರಣೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಕಟ್ಟಡ ಮಾಲೀಕರು, ಅಮಾನತುಗೊಂಡ ಅಧಿಕಾರಿಗಳ ವಿಚಾರಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ ತಿಳಿಸಿದರು.
ಹಿನ್ನಲೆ:
ಮಾರ್ಚ್ 19ರ ಮಧ್ಯಾಹ್ನ 3.40ಕ್ಕೆ ಸಂಭವಿಸಿದ ಕಟ್ಟಡ ದುರಂತದಲ್ಲಿ 70 ರಿಂದ 80 ಜನ ಕಟ್ಟಡದ ಅವಶೇಷಗಳಡಿ ಸಿಲುಕಿದ್ದರು. ಅದರಲ್ಲಿ 15 ಜನ ಗಂಭೀರವಾಗಿ ಗಾಯಗೊಂಡಿದ್ದರು, 57 ಜನರನ್ನು ಸುರಕ್ಷಿತವಾಗಿ ಕಟ್ಟಡದಿಂದ ಹೊರತರಲಾಗಿತ್ತು ಹಾಗೂ 19 ಜನ ಮೃತಪಟ್ಟಿದ್ದರು. ಈ ನಿರ್ಮಾಣ ಹಂತದ ಕಟ್ಟಡವು ಬೀಳಲು ಕಾರಣವಾದ ಸಂದರ್ಭಗಳು, ಅದಕ್ಕೆ ಕಾರಣವಾದ ಅಂಶಗಳು ಮತ್ತಿತರ ವಿಷಯಗಳ ಸಂಪೂರ್ಣ ಸತ್ಯಾಂಶ ತಿಳಿಯುವ ಸಲುವಾಗಿ ತನಿಖೆ ನಡೆಸಲು ಸೂಚಿಸಿ, ಸರ್ಕಾರವು ಮಾರ್ಚ್ 26 ರಂದು ಆದೇಶ ಹೊರಡಿಸಿತ್ತು. ಜೊತೆಗೆ, ಧಾರವಾಡದ ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ಅವರನ್ನು ದಂಡಾಧಿಕಾರಿ ವಿಚಾರಣಾ ಅಧಿಕಾರಿಗಳನ್ನಾಗಿ ( Magistirial Enquiry) ನೇಮಿಸಲಾಗಿತ್ತು.