ಹುಬ್ಬಳ್ಳಿ: ಪಶ್ಚಿಮ ಬಂಗಾಳದಲ್ಲಿನ ವೈದ್ಯರ ಮೇಲೆ ಹಲ್ಲೆ ಖಂಡಿಸಿ ಕಿಮ್ಸ್ ನ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ವಿನೂತನವಾಗಿ ಪ್ರತಿಭಟನೆ ನಡೆಸಿದರು. ತಲೆಗೆ, ಕೈ ಗೆ ಬ್ಯಾಂಡೇಜ್ ಸುತ್ತಿಕೊಂಡು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕಿಮ್ಸ್ನ ಹಿರಿಯ ರೋಗಿಗಳ ವಿಭಾಗ ಹಾಗೂ ಕೆಲ ಕಾಲ ತುರ್ತು ನಿಗಾ ಘಟಕದಲ್ಲಿನ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ಇದರಿಂದ ಕೆಲ ಕಾಲ ರೋಗಿಗಳು ಪರದಾಡುವಂತಾಯಿತು. ಆದರೆ, ವೈದ್ಯರು ಹಣೆಗೆ ರಕ್ತದ ಗುರುತಿನ ಬ್ಯಾಂಡೇಜ್ ಕಟ್ಟಿಕೊಂಡಿದ್ದನ್ನು ನೋಡಿದ ರೋಗಿಗಳ ಸಂಬಂಧಿಗಳು ವೈದ್ಯರ ಮೇಲೆ ಹಲ್ಲೆ ನಡೆದಿದೆ ಅಥವಾ ವೈದ್ಯರು ಹೊಡೆದಾಡಿಕೊಂಡಿದ್ದಾರೆ ಎಂಬ ಸುದ್ದಿ ಬಾಯಿಂದ ಬಾಯಿಗೆ ಹರಡಿ ಕೆಲ ಕಾಲ ಕಿಮ್ಸ್ ಆವರಣದಲ್ಲಿ ಜನ ಜಾತ್ರೆ ಸೇರಿತು.
ಕೊನೆಗೆ ಅಲ್ಲಿ ನಡೆದಿರುವುದು ವಿನೂತನ ಪ್ರತಿಭಟನೆ ಎಂಬುದನ್ನು ತಿಳಿದು ರೋಗಿಗಳು ಹಾಗೂ ಸಾರ್ವಜನಿಕರು ನಿಟ್ಟುಸಿರು ಬಿಟ್ಟರು.
ಪ್ರತಿಭಟನೆಯಲ್ಲಿ ಕಿರಿಯ ವೈದ್ಯರ ಸಂಘಟನೆ ಅಧ್ಯಕ್ಷ ಡಾ.ಮಲ್ಲಪ್ಪ, ಉಪಾಧ್ಯಕ್ಷ ಡಾ.ದರ್ಶನ, ಡಾ.ಮಾಲೇಗೌಡ, ಡಾ.ಗೋಪಿ, ಡಾ.ಧನ್ಯಶ್ರೀ ಸಂಪಗಾವಿ, ಡಾ. ವರ್ಷ, ಡಾ.ಇಂಚರ ಸೇರಿದಂತೆ ಹಲವು ವೈದ್ಯ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.