ಹುಬ್ಬಳ್ಳಿ: ಮೂರುಸಾವಿರ ಮಠದ ಉತ್ತರಾಧಿಕಾರಿ ವಿಚಾರಕ್ಕೆ ಸಂಬಂಧಿಸಿದಂತೆ ಭಾನುವಾರದ ಸತ್ಯ ದರ್ಶನಕ್ಕೆ ಅವಕಾಶ ನೀಡದಿದ್ರೆ ಸತ್ಯವನ್ನು ಮುಚ್ಚಿಡುವ ಕೆಲಸವಾಗುತ್ತದೆ. ಇದು ಬೇರೆ ತಿರುವುಪಡೆದುಕೊಳ್ಳಲಿದೆ ಎಂದು ಬಾಲೇಹೊಸೂರು ಮಠದ ದಿಂಗಾಲೇಶ್ವರ ಶ್ರೀಗಳು ಎಚ್ಚರಿಕೆ ನೀಡಿದರು.
ಸಭೆಗೆ ಆಹ್ವಾನಿಸಲು ಇಂದು ಅವರು ಮೂರುಸಾವಿರ ಮಠದ ಗುರುಸಿದ್ದರಾಜಯೋಗಿಂದ್ರ ಸ್ವಾಮೀಜಿ ಭೇಟಿ ಮಾಡಲು ಬಂದಿದ್ದರು. ಆದರೆ, ಭೇಟಿಗೆ ಅವಕಾಶ ನೀಡಲಿಲ್ಲ. ಇದರಿಂದ ಕೆಂಡಮಂಡಲರಾದ ದಿಂಗಾಲೇಶ್ವರ ಶ್ರೀಗಳು ಪರೋಕ್ಷವಾಗಿ ಶ್ರೀಗಳು ಹಾಗೂ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಭಾನುವಾರದ ಸಭೆಗೆ ಅವಕಾಶ ನೀಡಬೇಕು. ಇಲ್ಲವಾದರೆ ಅದಕ್ಕೂ ಮುನ್ನ ಯಾವುದಾದರೂ ನಿರ್ಧಾರವನ್ನು ಮಠದ ಆಡಳಿತ ಮಂಡಳಿ ತಗೆದುಕೊಳ್ಳಬೇಕು. ಇದನ್ನು ಬಿಟ್ಟು ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದರು. ಹಠ ಮಾಡುವುದರಿಂದ ಸಮಾಜದಲ್ಲಿ ಗೊಂದಲ ಸೃಷ್ಟಿಯಾಗಲಿದೆ. ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಸತ್ಯವನ್ನು ಮರೆಮಾಚುವ ಕೆಲಸ ಮಾಡಬಾರದು ಎಂದರು.
ಮಠಕ್ಕೆ ಬಿಗಿ ಭದ್ರತೆ:
ನಗರದ ಮೂರುಸಾವಿರ ಮಠಕ್ಕೆ ದಿಂಗಾಲೇಶ್ವರ ಶ್ರೀಗಳು ಭೇಟಿ ನೀಡುವುದನ್ನು ಅರಿತ ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದ್ದರು. ಆದ್ರೆ ಮಠದ ಒಳಗೆ ಹೋಗಲು ಪೊಲೀಸರು ನಿರಾಕರಣೆ ಮಾಡಿದ್ದರಿಂದ ಮಠದ ಕಟ್ಟೆ ಮೇಲೆ ಕುಳಿತು ಸ್ವಾಮೀಜಿಗಳ ಭೇಟಿಗಾಗಿ ಕಾಯ್ದು ಕುಳಿತರು. ಸ್ವಾಮೀಜಿ ಅವಕಾಶ ನೀಡದಿದ್ದರಿಂದ ನಿರಾಶರಾಗಿ ಮಠದಿಂದ ಮರಳಿದರು.