ಹುಬ್ಬಳ್ಳಿ: ಮಹಿಳಾ ದೌರ್ಜನ್ಯ ತಡೆಗೆ ಮಹಿಳಾ ಠಾಣೆಗಳು, ಪೊಲೀಸ್ ಗಸ್ತು ವ್ಯವಸ್ಥೆ, ಸಹಾಯವಾಣಿ ಸೇರಿ ಹಲವು ಯೋಜನೆಗಳ ಹೊರತಾಗಿಯೂ ದೌರ್ಜನ್ಯ ಪ್ರಕರಣಗಳು ನಿಂತಿಲ್ಲ. ಟ್ಯಾಕ್ಸಿ, ಬಸ್, ಹೋಟೆಲ್, ಸಾರ್ವಜನಿಕ ಸ್ಥಳಗಳಲ್ಲಿ, ಮನೆ, ಶಾಲೆ, ಕಚೇರಿಗಳಲ್ಲೂ ಮಹಿಳೆಯರಿಗೆ ಮತ್ತು ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಮಾಣ ಅಧಿಕವಾಗಿದೆ.
ಮನೆಯ ಹೊರಗೆ ನಡೆಯುವ ದೌರ್ಜನ್ಯಕ್ಕಿಂತ ಮನೆಯೊಳಗೆ ನಡೆಯುವ ಪ್ರಕರಣಗಳೇ ಹೆಚ್ಚು. ಈ ರೀತಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ದೂರು ನೀಡಲು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಸಮಸ್ಯೆ ಹೇಳಿಕೊಂಡರೆ ಸಮಾಜದಲ್ಲಿ ಎದುರಾಗುವ ಅವಮಾನಕ್ಕೆ ಅಂಜುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಹು-ಧಾ ಪೊಲೀಸ್ ಆಯುಕ್ತ ಲಾಬೂರಾಮ್, ಮಹಿಳಾ ಪೊಲೀಸ್ ಠಾಣೆ ಸೇರಿದಂತೆ ಎಲ್ಲಾ ಠಾಣೆಯಲ್ಲೂ ಮಹಿಳಾ ಸಿಬ್ಬಂದಿ ಇದ್ದಾರೆ. ಅಂತಹ ಪ್ರಕರಣಗಳ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳುವಂತೆ ಆದೇಶ ನೀಡಲಾಗಿದೆ. ಜೊತೆಗೆ ದೂರುದಾರರ ಜೊತೆ ಸಿಬ್ಬಂದಿ ನಿರಂತರ ಸಂಪರ್ಕದಲ್ಲಿದ್ದುಕೊಂಡು ಪ್ರಕರಣದ ತನಿಖೆ ಮುಂದುವರೆಸುವಂತೆ ತಿಳಿಸಲಾಗಿದೆ ಎಂದರು.
ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಕುಡುಕ ಗಂಡನ ಕಿರುಕುಳ, ದೈಹಿಕ–ಮಾನಸಿಕ ಹಲ್ಲೆ, ವರದಕ್ಷಿಣೆ ಕಿರುಕುಳ, ವಿಚ್ಛೇದನ, ಎರಡನೇ ಮದುವೆ, ಅಕ್ರಮ ಸಂಬಂಧ, ಪ್ರೇಮ ವಿವಾಹ, ದಂಪತಿ ನಡುವೆ ವೈಮನಸ್ಸು, ಯುವತಿಯರ ಪ್ರೇಮ ವೈಫಲ್ಯ... ಇಂತಹ ಹಲವು ಪ್ರಕರಣಗಳಿಗೆ ತ್ವರಿತ ಸ್ಪಂದನೆ ನೀಡಲಾಗುತ್ತದೆ. ಅಲ್ಲದೆ ಎಷ್ಟೋ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದರು.