ಹುಬ್ಬಳ್ಳಿ: 10 ವರ್ಷದ ಬಾಲಕಿಯೋರ್ವಳು ಅತ್ಯಂತ ವೇಗವಾಗಿ ಹೂಲಾಹೂಪ್ ರಿಂಗ್ ಸ್ಕೇಟಿಂಗ್ ಅನ್ನು ಮುಗಿಸಿ ಗಿನ್ನೀಸ್ ದಾಖಲೆ ಬರೆದಿದ್ದಾಳೆ. 100 ಮೀಟರ್ ಅಂತರವನ್ನು ಕೇವಲ 23.35 ಸೆಕೆಂಡ್‌ಗಳಲ್ಲಿ ಮುಗಿಸುವ ಮೂಲಕ ನೂತನ ದಾಖಲೆ ಮಾಡಿದ್ದು, ದೇಶಕ್ಕೆ ಕೀರ್ತಿ ತಂದಿದ್ದಾಳೆ.
ನಗರದ ಪರಿವರ್ತನ ಗುರುಕುಲದಲ್ಲಿ 4ನೇ ತರಗತಿ ಓದುತ್ತಿರುವ ಸ್ತುತಿ ಈ ಸಾಧನೆ ಮಾಡಿರುವ ಬಾಲಕಿಯಾಗಿದ್ದಾಳೆ. ಈಕೆ ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಕ್ಲಬ್ ಕೋಚ್ ಅಕ್ಷಯ ಸೂರ್ಯವಂಶಿ ಅವರ ಬಳಿ ತರಬೇತಿ ಪಡೆಯುತ್ತಿದ್ದು, 4 ವರ್ಷದವಳಾಗಿದ್ದಾಗಲೇ ಹವ್ಯಾಸಕ್ಕಾಗಿ ಹೂಲಾಹೂಪ್ ಆರಂಭಿಸಿ ಈಗ ಸರಣಿ ದಾಖಲೆ ಬರೆಯುತ್ತಿದ್ದಾಳೆ.
ಶಿರೂರು ಪಾರ್ಕ್‌ನ ಟೆಂಡರ್ ಶ್ಯೂರ್ ರಸ್ತೆ ಮೇಲೆ ನಡೆದ ಮೊದಲ ಯತ್ನದಲ್ಲಿ ಸ್ತುತಿ 23.68 ಮತ್ತು 2ನೇ ಯತ್ನದಲ್ಲಿ 23.88 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಮೂರನೇ ಯತ್ನದಲ್ಲಿ ಗುರಿ ತಲುಪಿದ 23.35 ಸೆಕೆಂಡ್ ಉತ್ತಮ ಸಮಯ ಎನಿಸಿಕೊಂಡಿತು.
‘ರೋಲರ್ ಸ್ಕೇಟಿಂಗ್‌ನ 3 ಹೂಲಾಹುಪ್‌ನಲ್ಲಿ ಆಸ್ಟ್ರೇಲಿಯಾದ ಮಾರ್ವಾ ಇಬ್ರಾಹಿಂ 2017ರ ಲಂಡನ್‌ನಲ್ಲಿ 27.26 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ನಿರ್ಮಿಸಿದ್ದ ಗಿನ್ನಿಸ್ ದಾಖಲೆಯನ್ನು ಹುಬ್ಬಳ್ಳಿಯ ಸ್ತುತಿ ಮುರಿದಿದ್ದಾಳೆ.
2018ರಲ್ಲಿ ಸ್ತುತಿ ಇನ್‌ಲೈನ್ ಸ್ಕೇಟಿಂಗ್‌ನ 1 ಹೂಲಾಹೂಪ್‌ನಲ್ಲಿ 11 ನಿಮಿಷ ಪ್ರದರ್ಶನ ನೀಡಿದ್ದಳು. ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಅದೇ ವರ್ಷದ ಆಗಸ್ಟ್‌ನಲ್ಲಿ 42 ನಿಮಿಷ 12 ಸೆಕೆಂಡ್ ಸಾಹಸ ಪ್ರದರ್ಶಿಸಿದ್ದು ಗಮನ ಸೆಳೆದಿತ್ತು. ಈ ಎರಡೂ ಸಾಹಸಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್, ವರ್ಲ್ಡ್ ರೆಕಾರ್ಡ್ಸ್ ಇಂಡಿಯಾ ಮತ್ತು ರೆಕಾರ್ಡ್ ಹಾಲಿಡೇ ರಿಪಬ್ಲಿಕ್ ಇಂಡಿಯಾ ಸೇರಿದಂತೆ ಹಲವು ದಾಖಲೆಗಳ ಗೌರವ ಲಭಿಸಿವೆ.
ಇದೀಗ ಮೂರು ರಿಂಗ್ ಬಳಸಿ 100 ಮೀಟರ್ ದೂರವನ್ನು ಅತ್ಯಂತ ವೇಗವಾಗಿ ಕ್ರಮಿಸಿರುವುದು ಹೊಸ ದಾಖಲೆಯಾಗಿದೆ.
2019ರ ಜುಲೈನಲ್ಲಿ 3 ರಿಂಗ್‌ನ ಹೈ ವೀಲ್ ಇನ್‌ಲೈನ್ ಸ್ಕೇಟಿಂಗ್‌ನ ಹೂಲಾಹೂಪ್‌ನಲ್ಲಿ ತೋರಿಸಿದ್ದ ಸಾಹಸಕ್ಕೆ ‘ವರ್ಲ್ಡ್ ರೆಕಾರ್ಡ್ ಇಂಡಿಯಾ’ ಸಂಸ್ಥೆಯ ದಾಖಲೆಯ ಮನ್ನಣೆ ಲಭಿಸಿತ್ತು. ದಾಖಲೆಯ ಉದ್ದೇಶದಿಂದಲೇ ಸ್ತುತಿ ಹೂಲಾಹೂಪ್‌ನಲ್ಲಿ 9 ನಿಮಿಷ 27 ಸೆಕೆಂಡ್‌ಗಳಲ್ಲಿ ಪ್ರದರ್ಶನ ನೀಡಿ, ಮುಂಬೈನ ಜಶ್ ಸರೋದೆ ದಾಖಲೆ (7 ನಿಮಿಷ) ಅಳಿಸಿ ಹಾಕಿದ್ದಾಳೆ.
ಮಗಳ ಈ ಸಾಧನೆಗೆ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಮಡಿಕೇರಿಯಲ್ಲಿ ಎಫ್ಐಆರ್