ಹುಬ್ಬಳ್ಳಿ: ಧಾರವಾಡ ಜಿಲ್ಲಾಡಳಿತ ಒಂದಿಲ್ಲೊಂದು ರೀತಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಪ್ರಯತ್ನ ಪಡುತ್ತಿದೆ. ಆದರೆ ಕೊರೊನಾ ಸೋಂಕಿತರ ಆರೋಗ್ಯದ ಬಗ್ಗೆ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಯ ಕೋವಿಡ್ ಸೆಂಟರ್‌ನಲ್ಲಿ ಸ್ವಚ್ಛತೆಯೇ ಇಲ್ಲದಂತಾಗಿದ್ದು, ಕೊರೊನಾ ಸೋಂಕಿತ ವ್ಯಕ್ತಿಗಳು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ. ಹುಬ್ಬಳ್ಳಿಯ ಅಂಜುಮನ್ ಕೋವಿಡ್ ಸೆಂಟರ್‌ನಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ.
ಜಿಲ್ಲಾಡಳಿತ ಮಾಡಿದ ಕೋವಿಡ್ ಸೆಂಟರ್‌ನಲ್ಲಿ ಮೂರು ದಿನಗಳಿಂದ ಬಿಸಿ ನೀರು ಬರುತ್ತಿಲ್ಲ. ಅಲ್ಲದೇ ಕೆಟ್ಟ ವಾಸನೆ ಬರುತ್ತಿರುವ ಕಾರಣ ಕೋವಿಡ್ ಸೆಂಟರ್ನಲ್ಲಿರುವ ರೋಗಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
‘ನಮಗೆ ಊಟ ಕೊಡದೇ ಇದ್ದರೂ ನಡೆಯುತ್ತದೆ. ಕೋವಿಡ್ ಸೆಂಟರ್‌ನಲ್ಲಿ ಸ್ವಚ್ಛತೆ ಕಾಪಾಡಿ. ಮೂರು ದಿನಗಳಿಂದ ಸ್ನಾನ ಮಾಡಲು ನೀರು ಇಲ್ಲ. ನೀರು ಕೊಡಿ’ ಎಂದು ಕೋವಿಡ್ ಸೋಂಕಿತರು ಅಂಗಲಾಚುತ್ತಿದ್ದಾರೆ.