ಧಾರವಾಡ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಲವೆಡೆ ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ರಸ್ತೆಯಲ್ಲೇ ನೀರು ಹರಿಯುತ್ತಿರುವುದರಿಂದ ಜಿಲ್ಲೆಯ ಅಳ್ನಾವರ ತಾಲೂಕು ಬೆಣಚಿ ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಹುಲಿಕೆರೆಯಿಂದ ಭಾರಿ ಪ್ರಮಾಣದ ನೀರು ಹೊರ ಹೋಗುತ್ತಿರುವುದರಿಂದ ಅಳ್ನಾವರ ಪಟ್ಟಣ ಜಲಾವೃತಗೊಂಡಿದೆ.
ನವಲಗುಂದ ತಾಲೂಕಿನ ಬೆಣ್ಣಿಹಳ್ಳ-ತುಪ್ಪರಿಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮುನ್ನೆಚ್ಚರಿಕ ಕ್ರಮವಾಗಿ ತಾಲೂಕಿನ ಅರೆಕುರಹಟ್ಟಿಯಲ್ಲಿ ಪುನರ್ವಸತಿ ಕೇಂದ್ರ ತೆರೆಯಲಾಗಿದೆ.
ಸುಮಾರು 10ಕ್ಕೂ ಹೆಚ್ಚು ಮನೆಗಳು ಕುಸಿತಗೊಂಡಿದ್ದು, ಧಾರವಾಡದ ಕಮಲಾಪುರದಲ್ಲಿ 1, ಲಖಮಾಪೂರ ಗ್ರಾಮದಲ್ಲಿ 3, ಯಾದವಾಡದಲ್ಲಿ 4 ಹಾಗೂ ಸಲಕಿನಕೊಪ್ಪ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಹಲವೆಡೆ ಮನೆಗಳು ಕುಸಿದಿವೆ.