ಹುಬ್ಬಳ್ಳಿ: ಉತ್ತರಾಧಿಕಾರಿ ವಿವಾದಕ್ಕೆ ಮೂರುಸಾವಿರ ಮಠದ ಗುರು ಸಿದ್ದರಾಜ ಯೋಗೀಂದ್ರ ಸ್ವಾಮೀಜಿ ತೆರೆ ಎಳೆದಿದ್ದಾರೆ ಎಂಬ ಸಂದೇಶವನ್ನು ಸೂಕ್ಷ್ಮವಾಗಿ ರವಾನಿಸಿದ್ದಾರೆ.
ಮೂರುಸಾವಿರ ಮಠದ ಜಗದ್ಗುರು ಗುರು ಸಿದ್ಧರಾಜ ಯೋಗೀಂದ್ರ ಸ್ವಾಮೀಜಿಗಳು ವಿವಾದಕ್ಕೆ ಇತಿಶ್ರೀ ಹಾಡಿದ್ದಾರೆ ಎಂಬುದಕ್ಕೆ ಅವರ ಇತ್ತೀಚಿನ ನಡೆ ಸಾರಿ ಹೇಳುತ್ತಿವೆ. ಬಾಲೆಹೊಸೂರು ಮಠದ ದಿಂಗಾಲೇಶ್ವರ ಶ್ರೀ ಹಾಗೂ ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿ ಮಧ್ಯೆ ಉತ್ತರಾಧಿಕಾರಿ ವಿಚಾರವಾಗಿ ಪೈಪೋಟಿ ಇತ್ತು. ಕಳೆದ ತಿಂಗಳು ಇಬ್ಬರೂ ಸ್ವಾಮೀಜಿಗಳು ಮೂರುಸಾವಿರ ಮಠದಲ್ಲಿ ತಮ್ಮ ಶಕ್ತಿ ಪ್ರದರ್ಶನ ನಡೆಸಿದ್ದರು. ಆಗ ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ ತುಟಿ ಪಿಟಕ್ ಎನ್ನದೇ ಮೌನಕ್ಕೆ ಶರಣಾಗಿದ್ದರು.
ಈಗ ಏಕಾ ಏಕಿ ಜಗದ್ಗುರುಗಳ ನಡೆಯಲ್ಲಿ ಭಾರೀ ಬದಲಾವಣೆಯಾಗಿದೆ. ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿಯತ್ತ ಜಗದ್ಗುರುಗಳ ಮೃದು ಧೋರಣೆ ಹೊಂದಿರುವದು ಸ್ವಷ್ಟವಾಗಿ ಕಂಡು ಬರುತ್ತಿದೆ. ಮೂರುಸಾವಿರ ಮಠದ ಮೂಜಗು ಶ್ರೀಗಳ ಮಾರ್ಗದರ್ಶನದಲ್ಲೇ ಜಗ್ಗಲಿಗೆ ಹಬ್ಬ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮೂಜಗು ಶ್ರೀ ಹಾಗೂ ಮಲ್ಲಿಕಾರ್ಜುನ ಸ್ವಾಮೀಜಿ ಅಕ್ಕ ಪಕ್ಕ ಕುಳಿತುಕೊಳ್ಳುವ ಮೂಲಕ ನಾಡಿಗೆ ಸೂಕ್ಷ್ಮ ಸಂದೇಶವನ್ನು ರವಾನಿಸಿದ್ದಾರೆ.
ವೇದಿಕೆಯ ಮೇಲಿದ್ದ ಹಲವು ಮಠಾಧೀಶರು ಮೂಜಗು ಶ್ರೀಗಳ ಆಮಂತ್ರಣದ ಮೇಲೆಯೇ ಆಗಮಿಸಿದ್ದರು. ಅದೇ ತರನಾಗಿ ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿಗೂ ಆಮಂತ್ರಣ ಇತ್ತು. ಆದ್ರೆ, ದಿಂಗಾಲೇಶ್ವರ ಶ್ರೀಗಳನ್ನು ಕಾರ್ಯಕ್ರಮದಿಂದ ದೂರ ಇಡಲಾಗಿದೆ. ಈ ಬೆಳವಣಿಗೆಗಳಿಂದ ಜಗದ್ಗುರುಗಳ ಅಂತರಂಗದಲ್ಲಿ ಮೂರುಸಾವಿರ ಮಠದ ಉತ್ತರಾಧಿಕಾರಿ ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿ ಇದ್ದಾರೆ ಎನ್ನಲಾಗುತ್ತಿದೆ.