ಹುಬ್ಬಳ್ಳಿ: ದಿನೇ ದಿನೆ ಏರುತ್ತಿರುವ ಇಂಧನ ಬೆಲೆ ಈಗ ಪ್ರತೀ ಕ್ಷೇತ್ರದ ಮೇಲೂ ತನ್ನ ಪರಿಣಾಮ ಬೀರಿದೆ. ಹೌದು, ಇಂಧನ ಬೆಲೆ ಏರಿಕೆಯಿಂದ ಹುಬ್ಬಳ್ಳಿ ಜನತೆಯೀಗ ನಗರ ಹಾಗೂ ಗ್ರಾಮೀಣ ಸಾರಿಗೆ ಬಸ್ನತ್ತ ಮುಖಮಾಡಿದ್ದಾರೆ.
ಮೊದಲೆಲ್ಲ ನಗರ ಹಾಗೂ ಗ್ರಾಮೀಣ ಸಾರಿಗೆ ಬಸ್ಗಳು ಖಾಲಿ ಖಾಲಿ ಓಡಾಡುತ್ತಿದ್ದವು. ಆದ್ರೀಗ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯು ಸಾರ್ವಜನಿಕರ ದೈನಂದಿನ ಬದುಕನ್ನೇ ಬದಲಾಯಿಸಿ ಬಿಟ್ಟಿದೆ. ಬೈಕ್, ಕಾರು ತೆಗೆದುಕೊಂಡು ಸಂಚರಿಸುತ್ತಿದ್ದ ಜನರೀಗ ಸರ್ಕಾರಿ ಸಾರಿಗೆ ಸಂಸ್ಥೆಯ ವಾಹನಕ್ಕೆ ಮೊರೆ ಹೋಗಿದ್ದಾರೆ.
ಕೋವಿಡ್ -19 ಭಯದಿಂದ ಜನರು ಸಾರ್ವಜನಿಕ ಸಾರಿಗೆ ಬಸ್‌ಗಳನ್ನು ಹತ್ತಲು ಹಿಂಜರಿಯುತ್ತಿದ್ದರು. ಆದರೆ, ಇಂಧನ ಬೆಲೆ ಏರಿಕೆಯಿಂದ ಜನರೀಗ ಬಸ್ ಸಂಚಾರದ ಮೊರೆ ಹೋಗಿದ್ದಾರೆ. ನಗರಗಳಲ್ಲಿ ತಮ್ಮ ಕೆಲಸದ ಸ್ಥಳಗಳನ್ನು ತಲುಪುವ ಸಲುವಾಗಿ ಸಿಟಿ ಬಸ್‌ನಲ್ಲಿ ಪ್ರಯಾಣಿಸಲು ಸಾರ್ವಜನಿಕರು ಮುಂದಾಗಿದ್ದಾರೆ.
ಇಂಧನ ಬೆಲೆಯ ಅತಿಯಾದ ಏರಿಕೆಯು ಕೆಳ ಮತ್ತು ಮಧ್ಯಮ ವರ್ಗದ ಜನರ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಹೌದು, ಜನರು ತಮ್ಮ ವಾಹನಗಳನ್ನು ಹೊರತೆಗೆಯುವ ಮೊದಲು ಎರಡು ಬಾರಿ ಯೋಚಿಸುವಂತಾಗಿದ್ದು, ಸಿಟಿ ಬಸ್ ಕಡೆಗೆ ಮುಖ ಮಾಡಿದ್ದಾರೆ. ಕಳೆದ ತಿಂಗಳು 90 ಸಾವಿರ ಜನರು ಸಿಟಿ ಬಸ್‌ನಲ್ಲಿ ಪ್ರಯಾಣಿಸಿದರೆ, ಈಗ ನಗರ ಸಾರಿಗೆಯಲ್ಲಿ ಪ್ರಯಾಣಿಸುವವರ ಸಂಖ್ಯೆ ಲಕ್ಷ ತಲುಪಿದೆ.
ಓದಿ: ತರಕಾರಿ ದರದ ಮೇಲೆ ಇಂಧನ ಬೆಲೆ ಎಫೆಕ್ಟ್; ಗಗನಕ್ಕೇರಿದ ದರದಿಂದ ಹೈರಾಣಾದ ಜನತೆ!
ಹು-ಧಾ ಮಹಾನಗರದಲ್ಲಿ ಈಗಾಗಲೇ ನಗರ ಸಾರಿಗೆ ವಿಭಾಗದಲ್ಲಿ ಪ್ರಯಾಣಿಕರ ಸಂಖ್ಯೆ ಲಕ್ಷಕ್ಕೆ ತಲುಪಿದ್ದು,185 ಬಸ್ಗಳು ಕಾರ್ಯಾಚರಿಸುತ್ತಿವೆ. ಇಂಧನ ಬೆಲೆ ಏರಿಕೆಯಿಂದ ಜನರು ತಮ್ಮ ವಾಹನಗಳನ್ನು ಮನೆಯಲ್ಲಿಯೇ ಬಿಟ್ಟು ಸಾರಿಗೆ ಸಂಸ್ಥೆ ವಾಹನಗಳ ಮೊರೆ ಹೋಗಿರುವುದು ಸಾರಿಗೆ ಸಂಸ್ಥೆಯ ಉದ್ಯೋಗ ಹೆಚ್ಚಿಸಿದೆ.