ಧಾರವಾಡ : ನಮ್ಮ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಅಷ್ಟೇ ಅಲ್ಲ, ಎಲ್ಲಾ ಪಕ್ಷದಲ್ಲೂ ಗುಂಪುಗಾರಿಕೆಯಿದೆ. ಬಿಜೆಪಿಯಲ್ಲಿ ಈಗ ಅವರನ್ನು ಇಳಿಸಲು ಇವರು, ಇವರನ್ನು ಇಳಿಸಲು ಅವರು ಹೊರಟಿದ್ದಾರೆ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಯಾರೊಬ್ಬರ ಫಾಲೋವರ್ ಅಲ್ಲ, ನಾವೆಲ್ಲ ಕಾಂಗ್ರೆಸ್ ಫಾಲೋವರ್. ನಮ್ಮ ಹೈಕಮಾಂಡ್ ಹೇಳಿದ್ದೇ ನಮಗೆ ಫೈನಲ್ ಎಂದರು. ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ವಿಚಾರಕ್ಕೆ ಮಾತನಾಡಿದ ಅವರು, ಕೆಲವರು ಈಗಲೇ ನಮ್ಮ ಮುಖಂಡರಿಗೆ ಸಿಎಂ ಎಂದು ಹೇಳುತಿದ್ದಾರೆ. ಅದು ಅವರವರ ವೈಯಕ್ತಿಕ ಅಭಿಪ್ರಾಯ, ಚುನಾವಣೆ ಆಗಬೇಕು. ಅದರ ನಂತರ ಸಿಎಂ ಯಾರು ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.
ನಾನು ಮುಂದಿನ ಚುನಾವಣೆಯಲ್ಲಿ ಕಲಘಟಗಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಕ್ಷೇತ್ರ ಬದಲಾವಣೆ ಮಾಡುವುದಿಲ್ಲ. ಕಳೆದ ಬಾರಿ ಮಾಡಿದ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಲಾಗುವುದು ಎಂದರು. ಇದೇ ವೇಳೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಅವರು, ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ಅವರಿಗೆ ಅಕ್ರಮ ಸರಾಯಿ ಮಾರಾಟ ನಿಯಂತ್ರಿಸುವಂತೆ ಮನವಿ ಮಾಡಿದರು.
ಕಲಘಟಗಿ ಕ್ಷೇತ್ರದಲ್ಲಿ ಅಕ್ರಮ ಸಾರಾಯಿ ಮಾರಾಟದಿಂದ ಯುವ ಸಮುದಾಯ ಹಾಳಾಗುತ್ತಿದೆ. ಪಕ್ಕದ ಗೋವಾ ರಾಜ್ಯದಿಂದ ಅಕ್ರಮವಾಗಿ ಸರಾಯಿ ತೆಗೆದುಕೊಂಡು ಬಂದು ಮಾರಾಟ ಮಾಡಲಾಗುತ್ತಿದೆ. ಕೆಲ ಕಡೆಗಳಲ್ಲಿ ಸೀಜ್ ಮಾಡಿದರೂ ಸಹ ಇದು ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ ಎಂದರು. ಅಕ್ರಮ ಸರಾಯಿ ಮಾರಾಟದಿಂದ ಹಳ್ಳಿಗಳ ವಾತಾವರಣ ಹಾಳಾಗುತ್ತಿದೆ. ಸಾರಾಯಿ ರಾಜ್ಯದಲ್ಲಷ್ಟೇ ಅಲ್ಲ, ದೇಶದಲ್ಲಿ ಬಂದ್ ಮಾಡಬೇಕು ಎಂದು ಆಗ್ರಹಿಸಿದರು.