ಹುಬ್ಬಳ್ಳಿ: ಗಣೇಶ ಹಬ್ಬದ ಆಚರಣೆಗಾಗಿ ದೂರದ ಸ್ಥಳಗಳಿಂದ ತಮ್ಮ ಸ್ವಂತ ಊರುಗಳಿಗೆ ಬರುವ ಹಾಗೂ ಹಬ್ಬ ಮುಗಿಸಿ ಹಿಂದಿರುಗುವ ಸಾರ್ವಜನಿಕರ ಪ್ರಯಾಣಿಕರಿಗೆ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
ಸೆಪ್ಟೆಂಬರ್ 16ರಂದು ವಾರಾಂತ್ಯ ಶನಿವಾರ, 17 ರಂದು ಭಾನುವಾರ ಮತ್ತು 18 ರಂದು ಸೋಮವಾರ ಸ್ವರ್ಣಗೌರಿ ವ್ರತ ಹಾಗೂ ಗಣೇಶ ಚತುರ್ಥಿ ಇದೆ. ಹಬ್ಬ ಆಚರಿಸಲು ಸೆಪ್ಟೆಂಬರ್ 15 ಮತ್ತು 16 ರಂದು ಬೆಂಗಳೂರು, ಮಹಾರಾಷ್ಟ್ರದ ಪುಣೆ ಸೇರಿದಂತೆ ರಾಜ್ಯ ಮತ್ತು ಅಂತಾರಾಜ್ಯದ ವಿವಿಧ ಪ್ರದೇಶಗಳಿಂದ ಹೆಚ್ಚಿನ ಪ್ರಯಾಣಿಕರು ಹಬ್ಬಕ್ಕಾಗಿ ಸ್ವಂತ ಊರುಗಳಿಗೆ ತೆರಳಲಿದ್ದಾರೆ. ಹಬ್ಬಕ್ಕೆ ಬರುವವರಿಗೆ ಅನುಕೂಲ ಆಗುವಂತೆ ಬೆಂಗಳೂರು ಮತ್ತಿತರ ಸ್ಥಳಗಳಿಂದ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಬಾಗಲಕೋಟೆ ಮತ್ತಿತರ ಪ್ರಮುಖ ಸ್ಥಳಗಳಿಗೆ ಹೆಚ್ಚುವರಿ ಬಸ್ಗಳು ಸಂಚರಿಸಲಿವೆ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.
ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಬಸ್: ವೋಲ್ವೊ, ಸ್ಲೀಪರ್, ರಾಜಹಂಸ ಮುಂತಾದ 50 ಪ್ರತಿಷ್ಟಿತ ಐಷಾರಾಮಿ ಬಸ್ಗಳು ಹಾಗೂ 200 ವೇಗದೂತ ಸಾರಿಗೆ ಸೇರಿದಂತೆ 250ಕ್ಕೂ ಹೆಚ್ಚು ಹೆಚ್ಚುವರಿ ಬಸ್ಗಳನ್ನು ಕಾರ್ಯಾಚರಣೆ ಮಾಡಲು ಯೋಜಿಸಲಾಗಿದೆ. ಅಲ್ಲದೇ, ಸ್ಥಳೀಯ ಬಸ್ ನಿಲ್ದಾಣಗಳಿಂದ ಜಿಲ್ಲೆಯೊಳಗೆ ಹಾಗೂ ನೆರೆಯ ಜಿಲ್ಲೆಗಳಿಗೆ ಅವಶ್ಯಕತೆಗೆ ತಕ್ಕಂತೆ ಹೆಚ್ಚುವರಿ ಬಸ್ ಓಡಿಸಲಾಗುತ್ತದೆ.
ಹಬ್ಬ ಮುಗಿಸಿಕೊಂಡು ಸ್ವಂತ ಊರುಗಳಿಂದ ಮರಳಿ ಬೆಂಗಳೂರು, ಮಂಗಳೂರು, ಹೈದರಾಬಾದ್, ಪುಣೆ ಇನ್ನಿತರ ಪ್ರಮುಖ ಸ್ಥಳಗಳಿಗೆ ತೆರಳುವ ಪ್ರಯಾಣಿಕರಿಗೂ ಅನುಕೂಲ ಕಲ್ಪಿಸಲಾಗುವುದು. ಸೆ. 19ರಿಂದ 24 ರವರೆಗೆ ಸಂಸ್ಥೆಯ ಎಲ್ಲ ವಿಭಾಗಗಳ ಪ್ರಮುಖ ಬಸ್ ನಿಲ್ದಾಣಗಳಿಂದ ಜನದಟ್ಟಣೆಗೆ ಅನುಗುಣವಾಗಿ 250ಕ್ಕೂ ಹೆಚ್ಚು ವಿಶೇಷ ಹೆಚ್ಚುವರಿ ಬಸ್ ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳ ಮಾಹಿತಿ ನೀಡಿದ್ದಾರೆ.
ಹಬ್ಬದ ವಿಶೇಷ ಬಸ್ಗಳಿಗೆ ಕೆಎಸ್ಆರ್ಟಿಸಿ ಮೊಬೈಲ್ ಆ್ಯಪ್ (KSRTC Mobile App), ಮುಂಗಡ ಬುಕ್ಕಿಂಗ್ ಕೌಂಟರ್ ಅಥವಾ ಸಂಸ್ಥೆಯ ವೆಬ್ಸೈಟ್ www.ksrtc.in ಮೂಲಕ ಮುಂಗಡ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕೊನೆಯ ಕ್ಷಣದ ರಷ್ನಿಂದ ತಪ್ಪಿಸಿಕೊಳ್ಳಲು ಕೂಡಲೇ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳುವುದು ಸೂಕ್ತ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಗಣೇಶ ಹಬ್ಬ ಆಚರಣೆ: ಬಿಬಿಎಂಪಿಯಿಂದ ಪಿಒಪಿ ಮೂರ್ತಿ ನಿಷೇಧ ಸೇರಿ ಹಲವು ರೂಲ್ಸ್