ಹುಬ್ಬಳ್ಳಿ: ಕಳೆದ ಐದು ದಶಕಗಳ ಹಿಂದೆ ಹುಬ್ಬಳ್ಳಿ ಜನರ ಪಾಲಿಗೆ ದೈವ ಸ್ವರೂಪಿಯಾಗಿತ್ತು ಮೂರು ಸಾವಿರ ಮಠದ ಆನೆ. ವರ್ಷದಲ್ಲಿ ಎರಡು ಬಾರಿ ದೇವರ ಮೂರ್ತಿ ಹೊತ್ತು ತಿರುಗುತ್ತಿದ್ದ ಗಜರಾಜ ವಿದ್ಯಾರ್ಥಿಗಳ ಪಾಲಿಗೆ ಕಲಿಕಾ ವಸ್ತುವಾಗುವ ಮೂಲಕ ಇನ್ನೂ ಜೀವಂತವಾಗಿದ್ದಾನೆ.
ಮೂರು ಸಾವಿರ ಮಠದ ಹಿಂದಿನ ಶ್ರೀಗಳಾದ ಜಗದ್ಗುರು ಶ್ರೀಗಂಗಾಧರ ಮಹಾಸ್ವಾಮಿಗಳು ಶ್ರೀಮಠಕ್ಕೆ ಆನೆಯೊಂದನ್ನು ತಂದಿದ್ದರು. ಆ ಆನೆಯನ್ನು ಅಂಬಾರಿ ಉತ್ಸವ ಸೇರಿದಂತೆ ಅನೇಕ ಕಡೆಗಳಲ್ಲಿ ಕರೆದೊಯ್ಯುತ್ತಿದ್ದರು. ಮಠದ ಒಳಗಡೆ ಬಂದವರೆಲ್ಲ ಗಜರಾಜನ ಆಶೀರ್ವಾದ ಪಡೆದುಕೊಂಡೇ ಹೋಗುತ್ತಿದ್ದರು. ಆದರೆ ಮಠದ ಆವರಣದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ವಿದ್ಯುತ್ ಅವಘಡದಿಂದ ಗಜರಾಜ ಸಾವನ್ನಪ್ಪಿತ್ತು. ಬಳಿಕ ಮಠದ ಸಿಬ್ಬಂದಿ, ಭಕ್ತರೆಲ್ಲರೂ ಸೇರಿ ಮೆರವಣಿಗೆ ಮುಖಾಂತರ ತೆರಳಿ ಬಿಡ್ನಾಳ ಸಮೀಪ ಆನೆಯನ್ನು ಶವಸಂಸ್ಕಾರ ಮಾಡಿದ್ದರು.
1971ರಲ್ಲಿ ತೀರಿಹೋದ ಆನೆಯನ್ನು ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಪಿ ಸಿ ಜಾಬಿನ್ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಸಿ.ಜೆ. ಸವಣೂರಮಠ ಮತ್ತು ಪ್ರೊ. ಸಿ.ಜಿ. ಧಾಡುತಿ ಹಾಗೂ ಇಬ್ಬರು ವಿದೇಶಿ ವಿದ್ಯಾರ್ಥಿಗಳು ಮೃತ ಆನೆಯನ್ನು ಕಲಿಕಾ ಪ್ರಯೋಗಕ್ಕೆ ಬಳಸಿಕೊಳ್ಳಲು ನಿರ್ಧರಿಸಿದರು. ಮೂರುಸಾವಿರಮಠದ ಮೂಜಗಂ ಸ್ವಾಮೀಜಿಗಳ ಅನುಮತಿ ಪಡೆದು ಮೃತ ಆನೆಯನ್ನು ತೆಗೆದುಕೊಂಡು ಸುಮಾರು ಮೂರು ವರ್ಷಗಳ ಕಾಲ ಅದರ ಮಾಂಸವನ್ನು ತೆಗೆದು ಸ್ವಚ್ಛಗೊಳಿಸಿ ಅಸ್ಥಿಪಂಜರವನ್ನು ಸರಿಯಾಗಿ ಜೋಡಿಸಿ ತಮ್ಮ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಾಣಿ ಶಾಸ್ತ್ರ ಹಾಗೂ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಇಟ್ಟಿದ್ದಾರೆ.
ಇಡೀ ಏಷಿಯಾದಲ್ಲಿ ಇದು ನಾಲ್ಕನೇ ಆನೆಯ ಅಸ್ಥಿಪಂಜರವಾಗಿದೆ. ಪಿ ಸಿ ಜಾಬೀನ್ ಕಾಲೇಜಿನಲ್ಲಿರುವುದು ಕರ್ನಾಟಕದಲ್ಲಿರುವ ಏಕೈಕ ಆನೆ ಅಸ್ತಿ ಪಂಜರವಾಗಿದೆ.
ಆನೆಯಲ್ಲಿ ಎಷ್ಟು ಮೂಳೆಗಳಿವೆ, ಅವು ಹೇಗೆ ಇರುತ್ತವೆ ಎಂಬುದನ್ನು ಕಲ್ಪನೆ ಮಾಡಿಕೊಂಡು ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಈ ಆನೆಯ ಅಸ್ಥಿಪಂಜರ ಸಹಾಯಕವಾಗಿದೆ.