ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಕಾವು ಮತ್ತೆ ಏರುತ್ತಿದೆ. ಮುಂದಿನ 6 ಆರು ತಿಂಗಳು ಯಾವುದೇ ಚುನಾವಣೆ ನಡೆಸಬಾರದೆಂದು ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ವಾರ್ಡ್ವಾರು ಮತದಾರರ ಪಟ್ಟಿ ತಯಾರಿಸಿ ಎಂದು ರಾಜ್ಯ ಚುನಾವಣಾ ಆಯೋಗ ಧಾರವಾಡ ಜಿಲ್ಲಾಧಿಕಾರಿಗೆ ಸೂಚಿಸಿದೆ.
ಕೋವಿಡ್ ಹಿನ್ನೆಲೆ ಮುಂದಿನ ಆರು ತಿಂಗಳು ಯಾವುದೇ ಚುನಾವಣೆ ನಡೆಸದಂತೆ ಸರ್ಕಾರ ಆದೇಶ ಹೊರಡಿಸಿತ್ತು. ಆಯೋಗದ ಸೂಚನೆಯಂತೆ ಮತದಾರರ ಪಟ್ಟಿಯ ತಯಾರಿಕೆ ಕಾರ್ಯವನ್ನು ಕೈಗೊಳ್ಳಬೇಕೋ ಅಥವಾ ಸರ್ಕಾರದ ಆದೇಶದಂತೆ ಸ್ಥಗಿತಗೊಳಿಸಬೇಕೋ ಎನ್ನುವ ಗೊಂದಲದಲ್ಲಿ ಜಿಲ್ಲಾಡಳಿತವಿತ್ತು.
ಈ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಚುನಾವಣಾ ಆಯೋಗಕ್ಕೆ ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದರು. ಜಿಲ್ಲಾಧಿಕಾರಿಗಳ ಪತ್ರಕ್ಕೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ರಾಜ್ಯ ಉಚ್ಛ ನ್ಯಾಯಾಲಯದ ಆದೇಶದಂತೆ ಕಾಲ ಮಿತಿಯೊಳಗಾಗಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಹೀಗಾಗಿ 14-6-2021ರಂದು ನೀಡಿರುವ ಕಾರ್ಯಕ್ರಮ ಪಟ್ಟಿಯಂತೆ ಮತದಾರರ ಪಟ್ಟಿಯನ್ನು ತಯಾರಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಧಾರವಾಡ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: 3ನೇ ಅಲೆ ಮುನ್ನವೇ ನಡೆಯಲಿದೆ ಪಾಲಿಕೆ ಚುನಾವಣೆ: ಎರಡು ತಿಂಗಳಲ್ಲಿ ಎಲೆಕ್ಷನ್
ಹು-ಧಾ ಮಹಾನಗರ ಪಾಲಿಕೆ ಚುನಾವಣೆಯ ಹಗ್ಗಜಗ್ಗಾಟಕ್ಕೆ ಚುನಾವಾಣಾ ಆಯೋಗ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು, ಹೈಕೋರ್ಟ್ ಆದೇಶ ಪಾಲನೆ ಮಾಡುವಂತೆ ಖಡಕ್ ಸೂಚನೆ ನೀಡಿದೆ.