ಹುಬ್ಬಳ್ಳಿ: ಉಚಿತ ಆನ್ಲೈನ್ ವೈದ್ಯಕೀಯ ಸಲಹೆ ಪಡೆದುಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದಾರೆ. ಇ-ಸಂಜೀವಿನಿ ಬಳಕೆಗೆ ನಿರಾಸಕ್ತಿ ವ್ಯಕ್ತವಾಗುತ್ತಿದೆ. ಕೋವಿಡ್ ಸಮಯದಲ್ಲಿ ಜನರ ಅಂಗೈಯಲ್ಲಿ ತುರ್ತು ಆರೋಗ್ಯ ಸೇವೆ ಲಭಿಸಲಿ ಎಂಬ ಉದ್ದೇಶದಿಂದ 2019ರ ಡಿಸೆಂಬರ್ನಲ್ಲಿ ಇ- ಸಂಜೀವಿನಿ ಆನ್ಲೈನ್ ಉಚಿತ ಚಿಕಿತ್ಸೆಯ ಸೇವೆಯನ್ನು ಸರ್ಕಾರ ಪ್ರಾರಂಭಿಸಿತ್ತು. ಆದರೆ, ಯೋಜನೆಯ ಲಾಭ ಪಡೆಯುವಲ್ಲಿ ಜನ ಹಿಂದೆ ಬಿದ್ದಿದ್ದಾರೆ.
ಜೂನ್ 15ರವರೆಗಿನ ಅಂಕಿ ಅಂಶಗಳ ಪ್ರಕಾರ, ಇ-ಸಂಜೀವಿನಿಯ ಆ್ಯಪ್ ಮೂಲಕ ರಾಜ್ಯದ 10, 46,820 ಜನರು ಸೇವೆ ಪಡೆದುಕೊಂಡಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿಯೇ ಜನರಿಗೆ ಆ್ಯಪ್ ಮೂಲಕ ಆನ್ಲೈನ್ ವೈದ್ಯಕೀಯ ಸೇವೆ ಒದಗಿಸುತ್ತಿದ್ದಾರೆ. ಆದರೆ, ಹೆಚ್ಚಿನ ಜನರು ಸೇವೆಯ ನೇರ ಲಾಭ ಪಡೆಯಲು ಮುಂದಾಗಿಲ್ಲ.
ಇ-ಸಂಜೀವಿನಿ ಆ್ಯಪ್ ಅನ್ನು ಪ್ರತಿಯೊಬ್ಬರೂ ತಮ್ಮ ಸ್ಮಾರ್ಟ್ಫೋನ್ಗಳಲ್ಲಿ ಡೌನ್ ಲೋಡ್ ಮಾಡಿಕೊಳ್ಳುವ ಮೂಲಕ ಆನ್ಲೈನ್ನಲ್ಲಿ ನೇರವಾಗಿ ವೈದ್ಯರನ್ನು ಸಂಪರ್ಕಿಸಬಹುದು. ಅಲ್ಲದೆ, ತಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬಹುದು. ಆದರೆ, ಈ ಕುರಿತು ಇನ್ನೂ ಸಾಕಷ್ಟು ಜಾಗೃತಿ ಆಗಿಲ್ಲ.
ಕೇಂದ್ರ ಸರ್ಕಾರದ ಟೆಲಿಮೆಡಿಸಿನ್ ಯೋಜನೆಯಡಿ ರಾಜ್ಯದಲ್ಲಿ ಇ-ಸಂಜೀವಿನಿ ಆನ್ಲೈನ್ ಉಚಿತ ಸೇವೆಯನ್ನು ಪ್ರಾರಂಭಿಸಲಾಗಿದೆ. ಪ್ರತಿನಿತ್ಯ 21,728 ಜನರಿಗೆ ಈ ಸೇವೆ ಒದಗಿಸಬೇಕೆಂಬ ಗುರಿಯನ್ನು ಆರೋಗ್ಯ ಇಲಾಖೆ ತನ್ನ ಸಿಬ್ಬಂದಿಗೆ ನೀಡಿತ್ತು. ಆದರೆ, ಈ ಗುರಿಯ ಪೈಕಿ ಶೇ. 21.4ರಷ್ಟು ಮಾತ್ರ ತಲುಪಲಾಗಿದೆ. ಪ್ರತಿದಿನ ಸರಾಸರಿ 4,644 ಜನರನ್ನು ಮಾತ್ರ ತಲುಪಲಾಗುತ್ತಿದೆ.