ಹುಬ್ಬಳ್ಳಿ: ಇಲ್ಲಿನ ಕುಂದಗೋಳಕ್ಕೆ ಭೇಟಿ ನೀಡಿ ಜನರ ಸಂಚಾರಕ್ಕೆ ಕಡಿವಾಣ ಹಾಕಲು ಕೈಗೊಳ್ಳಲಾದ ಲಾಕ್ಡೌನ್ ಕ್ರಮಗಳನ್ನು ಧಾರವಾಡ ಜಿಲ್ಲಾ ಗ್ರಾಮೀಣ ಡಿವೈಎಸ್ಪಿ ರವಿ ನಾಯಕ ಅವರು ಪರಿಶೀಲನೆ ನಡೆಸಿದರು.
ಪಟ್ಟಣದ ಅಕ್ಷಯ ಇಂಡೇನ್ ಗ್ಯಾಸ್ ಡಿಸ್ಟ್ರಿಬ್ಯೂಟರ್ ಆಫೀಸ್ ಮುಂದೆ ಸಿಲಿಂಡರ್ ಪಡೆಯಲು ಜನರು ಗುಂಪು ಸೇರಿದ್ದರು. ಅದನ್ನು ನೋಡಿದ ಡಿವೈಎಸ್ಪಿ, ಕಚೇರಿಯಲ್ಲಿ ಸಿಲಿಂಡರ್ ನೀಡಿದರೆ ಜನದಟ್ಟಣೆ ಹೆಚ್ಚಾಗುತ್ತದೆ. ಅದಕ್ಕೆ ಕಡಿವಾಣ ಹಾಕಲು ನೀವೇ ಮನೆಗೆ ಹೋಗಿ ವಿತರಿಸಿ ಎಂದು ತಾಕೀತು ಮಾಡಿದರು.
ಮತ್ತೊಂದೆಡೆ ಪಟ್ಟಣದ ಮೆಡಿಕಲ್ ಶಾಪ್ ಮುಂದೆ ಸಾಮಾಜಿಕ ಅಂತರ ಮೀರಿ ಜಮಾಯಿಸಿದ್ದ ಜನರಿಗೆ ಇನ್ಸ್ಪೆಕ್ಟರ್ ಬಸವರಾಜ ಕಲ್ಲಮ್ಮನವರ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದರು. ಮೆಡಿಕಲ್ ಶಾಪ್ ಮಾಲೀಕನಿಗೆ ದಂಡ ವಿಧಿಸಿದರು. ಪಟ್ಟಣದ ಮಾರ್ಕೆಟ್ ರಸ್ತೆ, ಬಸ್ ನಿಲ್ದಾಣ, ತಹಶೀಲ್ದಾರ ಕಚೇರಿ ರಸ್ತೆ, ಹುಬ್ಬಳ್ಳಿ ಲಕ್ಷ್ಮೇಶ್ವರ ರಸ್ತೆ ಸೇರಿದಂತೆ ಪಟ್ಟಣದ ವಿವಿಧೆಡೆ ಸಂಚರಿಸಿ ಡಿವೈಎಸ್ಪಿ ಪರಿಶೀಲನೆ ನಡೆಸಿದರು.