ಧಾರವಾಡ: ಹು-ಧಾ ಮಹಾನಗರ ಪಾಲಿಕೆ ಚುನಾವಣಾ ಕಣ ರಂಗೇರುತ್ತಿರುವ ಬೆನ್ನಲ್ಲೇ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ನೀಡಬೇಕು ಎಂಬ ಕೂಗು ಮತ್ತೆ ಕೇಳಿ ಬಂದಿದೆ.
ಈಗಾಗಲೇ ಪಾಲಿಕೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ನಾಮಪತ್ರ ಸಲ್ಲಿಸಿ ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಹು- ಧಾ ಪಾಲಿಕೆ ವ್ಯಾಪ್ತಿಯ 82 ವಾರ್ಡ್‌ಗಳಿಗೆ ಚುನಾವಣೆ ನಡೆಯುತ್ತಿದೆ. ಅಭ್ಯರ್ಥಿಗಳ ಪ್ರಚಾರ ಒಂದೆಡೆಯಾದ್ರೆ, ಅಭಿವೃದ್ಧಿ ದೃಷ್ಟಿಯಿಂದ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಬೇಕು ಎಂಬ ಪ್ರಚಾರ ಕೂಡ ಜೋರಾಗಿದೆ.
ಹುಬ್ಬಳ್ಳಿಯಿಂದ ಬೇರ್ಪಡಿಸಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ನೀಡಬೇಕು ಎನ್ನುವ ಹೋರಾಟ ಬಹಳ ವರ್ಷಗಳ ಹಿಂದಿನಿಂದ ನಡೆಯುತ್ತಾ ಬಂದಿದೆ. ಯಾಕಂದ್ರೆ, ಪಾಲಿಕೆಗೆ ಬರುವ ಅನುದಾನದಲ್ಲಿ ಬಹುತೇಕ ಹುಬ್ಬಳ್ಳಿ ಪಾಲಾಗುತ್ತಿದೆ. ಹೀಗಾಗಿ ಧಾರವಾಡವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಮತ್ತೊಂದೆಡೆ, ಇಲ್ಲಿಯವರೆಗೆ 39 ಜನ ಮೇಯರ್ ಆಗಿದ್ದು, ಅದರಲ್ಲಿ ಧಾರವಾಡದಿಂದ ಕೇವಲ 13 ಜನ ಮಾತ್ರವೇ ಮೇಯರ್ ಸ್ಥಾನ ಪಡೆದಿದ್ದಾರೆ. ಹೀಗಾಗಿ ಚುನಾವಣೆ ಮಧ್ಯೆಯೇ ಪ್ರತ್ಯೇಕ ಪಾಲಿಕೆ ಹೋರಾಟದ ಪ್ರಚಾರ ಕೂಡ ಬಹಳಷ್ಟು ಸದ್ದು ಮಾಡುತ್ತಿದೆ.
ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ನೀಡಬೇಕು ಎಂದು ಆಗ್ರಹಿಸಿ ಸಾಹಿತಿಗಳು, ಶಿಕ್ಷಣ ತಜ್ಞರು ಸೇರಿದಂತೆ ಸ್ಥಳೀಯ ಮುಖಂಡರು ಪ್ರತ್ಯೇಕ ಪಾಲಿಕೆ ಹೋರಾಟ ಆರಂಭಿಸಿದ್ದಾರೆ. ಮನೆ, ಮನೆ ತೆರಳಿ ಹಾಗೂ ಮಾರುಕಟ್ಟೆ ಸ್ಥಳಗಳಲ್ಲಿ ಕರಪತ್ರಗಳನ್ನು ಹಂಚಿ ಜನರಿಗೆ ಅರಿವು ಮೂಡಿಸುತ್ತಿದ್ದಾರೆ.
ಒಂದೆಡೆ ಚುನಾವಣೆಗೆ ನಿಂತ ಅಭ್ಯರ್ಥಿಗಳು ಬೀದಿ ಬೀದಿ ತಿರುಗಿ ಪ್ರಚಾರ ಮಾಡುತ್ತಿದ್ದರೆ. ಪ್ರತ್ಯೇಕ ಪಾಲಿಕೆ ಹೋರಾಟಗಾರರು ಹಣ ಸಂಗ್ರಹಿಸಿ, ಭಿತ್ತಿಪತ್ರ ಮುದ್ರಿಸಿ, ಬ್ಯಾನರ್ ಹಿಡಿದು ಪ್ರತ್ಯೇಕಪಾಲಿಕೆ ಬೇಕೆಂದು ಹೋರಾಟ ಪ್ರಾರಂಭಿಸಿದ್ದಾರೆ.