ಹುಬ್ಬಳ್ಳಿ: ಕೋವಿಡ್ ಎರಡನೇ ಅಲೆ ತಂದೊಡ್ಡಿರುವ ಸಮಸ್ಯೆ ಅಷ್ಟಿಷ್ಟಲ್ಲ. ಕಿಲ್ಲರ್ ಕೊರೊನಾ ವೈರಸ್ ಅಟ್ಟಹಾಸ ಜನರ ಪರಿಸ್ಥಿತಿಯನ್ನು ಎಲ್ಲಿಗೆ ಕೊಂಡೊಯ್ಯುತ್ತದೆಯೋ ಎಂಬುದೇ ಈಗಿನ ಆತಂಕ. ತಮ್ಮ ಪ್ರಾಣ ಉಳಿಸಿಕೊಳ್ಳಲು ಜನರು ಆಕ್ಸಿಜನ್ ಮೊರೆ ಹೋಗುತ್ತಿದ್ದಾರೆ. ಕೊರೊನಾ ಕಾರಣ ಆಕ್ಸಿಜನ್ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಕೋವಿಡ್ ಎರಡನೇ ಅಲೆಯಿಂದ ಸಾವು ನೋವಿನ ಪ್ರಮಾಣ ಹೆಚ್ಚುತ್ತಿದೆ. ಈ ಸಂದರ್ಭ ಚಾಮರಾಜನಗರ ಆಕ್ಸಿಜನ್ ದುರಂತವನ್ನು ನೆನಪಿಸಿಕೊಳ್ಳಬಹುದು. ದೇಶಾದ್ಯಂತ ಇಂತಹ ಪ್ರಕರಣಗಳು ಜರುಗುತ್ತಲೇ ಇದ್ದು, ಆಕ್ಸಿಜನ್ ಇಲ್ಲದೇ ಕೊನೆಯುಸಿರೆಳೆದವರು ಹಲವರು. ಮಾರಕ ರೋಗದಿಂದ ಜೀವ ಉಳಿಸಿಕೊಳ್ಳಲು ಇದೀಗ ಆಕ್ಸಿಜನ್ ಅವಶ್ಯಕವಾಗಿದ್ದು, ಆಕ್ಸಿಜನ್ ಸಾಂದ್ರಕಗಳಿಗೆ ಬೇಡಿಕೆ ಹೆಚ್ಚಾಗಿದೆ.
ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್ ಸಮಸ್ಯೆ ಹೆಚ್ಚಾಗುತ್ತಿರುವುದರಿಂದ ಕೋವಿಡ್ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯಲು ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ಖರೀದಿಸಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಆಸ್ಪತ್ರೆಗಳಿಗೆ ಒತ್ತಡ ಕಡಿಮೆಯಾಗುತ್ತದೆ. ಅಲ್ಲದೇ ಆಕ್ಸಿಜನ್ ಬೆಡ್ ದೊರೆಯುತ್ತಿಲ್ಲ ಎಂಬುವಂತಹ ಸಮಸ್ಯೆಗಳ ನಿಯಂತ್ರಣಕ್ಕೆ ಇದು ಮಾರ್ಗೋಪಾಯವಾಗಿದೆ. ಇನ್ನೂ ಆಕ್ಸಿಜನ್ನಲ್ಲಿ ಲಿಕ್ವಿಡ್, ಸಿಲಿಂಡರ್ ಹಾಗೂ ಕಾನ್ಸಂಟ್ರೇಟರ್ ಎಂದು ಮೂರು ವಿಧಗಳಿದ್ದು, ಕಾನ್ಸಂಟ್ರೇಟರ್ಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯಲು ಸಹಕಾರಿಯಾಗಿದೆ.
ಅಲ್ಲದೇ ಆಕ್ಸಿಜನ್ ಲಿಕ್ವಿಡ್ಗಳು ಆಸ್ಪತ್ರೆಯಲ್ಲಿ ಉಪಯೋಗಕ್ಕೆ ಬರುತ್ತದೆ. ಇನ್ನು ಕಾನ್ಸಂಟ್ರೇಟರ್ಗಳು 5-10 ಲೀಟರ್ ಇರುವುದರಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಲು ಅನುಕೂಲವಾಗಿದೆ. ಈ ಹಿಂದೆ 45-50 ಸಾವಿರ ರೂಪಾಯಿಗಳಿಗೆ ಸಿಗುತ್ತಿದ್ದ ಆಕ್ಸಿಜನ್ ಕಾನ್ಸಂಟ್ರೇಟರ್ ಉತ್ಪನ್ನಗಳು ಈಗ ಮಾರುಕಟ್ಟೆಯಲ್ಲಿ 70 ಸಾವಿರ ಗಡಿದಾಟಿದೆ. ಆಕ್ಸಿಜನ್ ಕಾನ್ಸಂಟ್ರೇಟರ್ಗೆ ಹೋಲಿಸಿದರೆ ಆಕ್ಸಿಜನ್ ಸಿಲಿಂಡರ್ ಶುದ್ಧ ಆಮ್ಲಜನಕ ನೀಡುತ್ತದೆ ಎಂಬುದು ತಜ್ಞರ ಮಾತು.
ಇದನ್ನೂ ಓದಿ: ಮಂಡ್ಯದಲ್ಲಿ 1,367 ಜನರಿಗೆ ಕೋವಿಡ್ ಪಾಸಿಟಿವ್: ಇಬ್ಬರು ಸಾವು
ಪ್ರಸ್ತುತ ದಿನಮಾನಗಳಲ್ಲಿ ಜನರು ಕೋವಿಡ್ ಚಿಕಿತ್ಸೆಗೆ ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಆರ್ಥಿಕವಾಗಿ ಸಬಲವಾಗಿರುವ ಜನರು ಮನೆಯಲ್ಲಿಯೇ ಆಕ್ಸಿಜನ್ ಪಡೆದುಕೊಳ್ಳಲು ಮುಂದಾಗಿದ್ದಾರೆ. ಆದರೆ ಇದನ್ನು ಬಂಡವಾಳ ಮಾಡಿಕೊಂಡ ಕೆಲವರು ಆನ್ಲೈನ್ ಮೂಲಕ ವಂಚನೆ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಜನರು ಕಾಳಜಿ ವಹಿಸಿ ಆಕ್ಸಿಜನ್ ಸಾಂದ್ರಕಗಳನ್ನು ಖರೀದಿಸಬೇಕಿದೆ.