ಧಾರವಾಡ: ರಸಗೊಬ್ಬರ ನಿಯಂತ್ರಣ ಕಾಯ್ದೆ ಉಲ್ಲಂಘಿಸಿ ರೈತರ ಹೆಸರಿಲ್ಲಿ ಅಧಿಕ ರಸಗೊಬ್ಬರ ಮಾರಾಟ ಮಾಡಿದ ಕೃಪಾ ಅಗ್ರೋ ಇಂಡಸ್ಟ್ರೀಸ್ ಕಾರ್ಪೊರೇಷನ್ ಅವರ ರಸಗೊಬ್ಬರ ವಿತರಕರ ಮಾರಾಟ ಪರವಾನಿಗೆಯನ್ನು ಜಿಲ್ಲಾಧಿಕಾರಿ ಅಮಾನತು ಮಾಡಿದ್ದಾರೆ.
ರಸಗೊಬ್ಬರ ನಿಯಂತ್ರಣ ಕಾಯ್ದೆ 1985ರ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಅವರು ಕೃಪಾ ಅಗ್ರೋ ಇಂಡಸ್ಟ್ರೀಸ್ ಕಾರ್ಪೊರೇಷನ್ ಅವರ ರಸಗೊಬ್ಬರ ವಿತರಕರ ಮಾರಾಟ ಪರವಾನಿಗೆಯನ್ನು ಅಮಾನತುಗೊಳಿಸಿದ್ದಾರೆ.
ಕಾಳಸಂತೆಯಲ್ಲಿ ಯೂರಿಯಾ ಮಾರಾಟವಾಗುವುದನ್ನು ತಡೆಯಲು ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ರಸಗೊಬ್ಬರ ವಿತರಕರು ಚಿಲ್ಲರೆ ಮಾರಾಟಗಾರರ ಮೇಲೆ ನಿಗಾ ಇಟ್ಟಿದ್ದು, ಕೃಷಿ ಇಲಾಖೆ ಪರಿವೀಕ್ಷಕರ ತಂಡ ಹಾಗೂ ತಹಶೀಲ್ದಾರ್ಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ನಿನ್ನೆ 10 ಮಾರಾಟಗಾರರ ಪರವಾನಗಿ ಅಮಾನತು ಗೊಳಿಸಲಾಗಿತ್ತು. ಇಂದು ಮತ್ತೊಂದು ಪರವಾನಿಗೆ ಅಮಾನತಾಗಿದೆ.
ಕೃಷಿ ಇಲಾಖೆಯ ಪರಿವೀಕ್ಷಕರ ತಂಡ ಜಿಲ್ಲೆಯ ಎಲ್ಲಾ ರಸಗೊಬ್ಬರ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸುವ ಕಾರ್ಯ ಮುಂದುವರೆಸಲಿದೆ. ತಪ್ಪಿತಸ್ಥರ ವಿರುದ್ಧ ರಸಗೊಬ್ಬರ ನಿಯಂತ್ರಣ ಕಾಯ್ದೆಯಡಿ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಲಿದೆ.