ಧಾರವಾಡ: ಜುಲೈ 21 ರಂದು ರೈತ ಹುತಾತ್ಮ ದಿನಾಚರಣೆಯನ್ನು ಆಚರಿಸುತ್ತಿರುವ ಹಿನ್ನೆಲೆ ನವಲಗುಂದ ಶಹರ ಮತ್ತು ಅಳಗವಾಡಿ ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಜು.21 ರಂದು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ, ಜು. 20ರ ಮಧ್ಯರಾತ್ರಿ 12 ಗಂಟೆಯಿಂದ ಜು.22ರ ಬೆಳಗಿನ ಜಾವ 6 ಗಂಟೆಯವರೆಗೆ ಮದ್ಯ ಮಾರಾಟ ಹಾಗೂ ಮದ್ಯ ಸಾಗಾಣಿಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗ್ಡೆ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಆದೇಶ ಹೊರಡಿಸಿರುವ ಅವರು ನಿಷೇಧಿತ ದಿನಾಂಕಗಳಂದು ಭಾರತೀಯ ಮದ್ಯ ತಯಾರಿಕಾ ಘಟಕಗಳು, ಬಾರ್ಗಳು, ಕ್ಲಬ್‍ಗಳು ಮತ್ತು ಮದ್ಯದ ಡಿಪೋಗಳನ್ನು ಮುಚ್ಚತಕ್ಕದ್ದು. ಇದಲ್ಲದೇ ಪರಿಸ್ಥಿತಿಗನುಗುಣವಾಗಿ ಸಾರ್ವಜನಿಕ ಶಾಂತತೆಯನ್ನು ಕಾಯ್ದುಕೊಂಡು ಬರುವ ಹಿತದೃಷ್ಟಿಯಿಂದ ವಲಯ ಅಬಕಾರಿ ಇನ್ಸ್ಪೆಕ್ಟರ್ಗಳು ಹಾಗೂ ಉಪವಿಭಾಗ ಅಬಕಾರಿ ಅಧೀಕ್ಷಕರು, ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21 (2) ರನ್ವಯ ಅವಶ್ಯಕತೆ ಕಂಡುಬಂದಲ್ಲಿ ಶಾಂತಿ ಪಾಲನೆಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಅಬಕಾರಿ ಉಪ ಆಯುಕ್ತರು ಧಾರವಾಡ ಮತ್ತು ಆರಕ್ಷಕ ಅಧೀಕ್ಷಕರು ಧಾರವಾಡ ಹಾಗೂ ಹೆಚ್ಚುವರಿ ಅಬಕಾರಿ ಅಧೀಕ್ಷಕರು ತಮ್ಮ ವ್ಯಾಪ್ತಿಯಲ್ಲಿ ಈ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗ್ಡೆ ಆದೇಶದಲ್ಲಿ ಸೂಚಿಸಿದ್ದಾರೆ.
ಇದನ್ನೂ ಓದಿ: Haveri Golibar.. ಹಾವೇರಿ ಗೋಲಿಬಾರ್ಗೆ 16 ವರ್ಷ.. ಹುತಾತ್ಮ ರೈತರಿಗೆ ಮೌನಾಚರಣೆ ಮೂಲಕ ನಮನ